Advertisement

ತೆಂಗು ಕೀಟ ಬಾಧೆ, ಮೀನು ಸಾಕಣೆ ಪ್ರಾತ್ಯಕ್ಷಿಕೆ, ಕಾರ್ಯಾಗಾರ 

12:12 PM Jan 24, 2018 | |

ಮೂಡಬಿದಿರೆ: ಸಮಗ್ರ ಕೃಷಿಯಿಂದ ಮಾತ್ರ ನ್ಯಾಯಬದ್ಧ ಲಾಭ ಸಿಗಲು ಸಾಧ್ಯ. ರೈತರಿಗೆ ವಿಜ್ಞಾನದ ಅಂಶಗಳನ್ನು ಮಾತ್ರ ತಿಳಿಸಿದರೆ ಸಾಲದು. ಜತೆಗೆ ಅರ್ಥಶಾಸ್ತ್ರದ ಲೆಕ್ಕಾಚಾರಗಳನ್ನೂ ಕಲಿಸಬೇಕಾಗಿದೆ ಎಂದು ಜಿಲ್ಲಾ ಕೃಷಿ
ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಶಿವಕುಮಾರ ಮಗದ ಹೇಳಿದರು.

Advertisement

ಮೂಡಬಿದಿರೆಯ ಎಂಸಿಎಸ್‌ ಬ್ಯಾಂಕ್‌ ಕಲ್ಪವೃಕ್ಷ ಸಭಾಂಗಣದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರ, ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮೂಡಬಿದಿರೆ ಇನ್ನರ್‌ವೀಲ್‌ ಕ್ಲಬ್‌ ಮತ್ತು ಎಂ.ಸಿ.ಎಸ್‌. ಬ್ಯಾಂಕ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ತೆಂಗು ಕೀಟ ಬಾಧೆ ಮತ್ತು ಮೀನು ಸಾಕಣೆ ಕುರಿತಾದ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.  ರೈತರು ಹೆಚ್ಚುವರಿ ವೆಚ್ಚವಿಲ್ಲದೆ ವೈವಿಧ್ಯಮಯ ಮೀನು ಸಾಕಣೆಯನ್ನು ಕೈಗೊಂಡು ಬದುಕನ್ನು ಹಸನಾಗಿಸಿ ಕೊಳ್ಳಬಹುದು. ಮೂರು ನಾಲ್ಕು ಅಡಿ ಗಳಷ್ಟು ನೀರು ನಿಲ್ಲುವ ಹೊಲಗಳು, ಸಾಂಪ್ರದಾಯಿಕ ಕಟ್ಟಗಳು, ಕೆರೆಗಳು, ಸಿಮೆಂಟ್‌ ತೊಟ್ಟಿಗಳು, ಭತ್ತದ ಬೆಳೆಯ ನಡುವಿನ ಬಸಿಗಾಲುವೆಗಳೂ ಸೇರಿದಂತೆ ವಿವಿಧೆಡೆ ಮೀನು ಸಾಕಬಹುದು. ಈ ಬಗ್ಗೆ ಇಲಾಖೆಯಿಂದ ಆಸಕ್ತರಿಗೆ ಮಾಹಿತಿ, ಯೋಜನ ವರದಿ, ಮೀನುಮರಿಗಳನ್ನು ಒದಗಿಸಲಾಗುವುದು. ಊರಿನ ಕೋಳಿ ಯಂತೆ ಸ್ವರ್ಣಧಾರಾ ಕೋಳಿಯನ್ನು ಸಾಕಿ ಗರಿಷ್ಟ ಲಾಭ ಮಾಡಿಕೊಳ್ಳಬಹುದು ಎಂದರು.

ತೆಂಗು ಕೀಟ ಬಾಧೆ ಮತ್ತು ನಿವಾರಣೆ
ಕಾಸರಗೋಡು ಸಿಪಿಸಿಆರ್‌ಐ ಮುಖ್ಯ ವಿಜ್ಞಾನಿ ಡಾ| ವಿನಾಯಕ ಹೆಗ್ಡೆ ಅವರು ತೆಂಗು ಕೀಟ ಬಾಧೆ ಮತ್ತು ನಿವಾರಣೆಯ ಕುರಿತು ಮಾಹಿತಿ ನೀಡಿದರು. ಗರಿ ತಿನ್ನುವ ಕೀಟ, ಬಿಳಿ ಹುಳ, ಬಿಳಿ ನೊಣ, ನುಸಿ ಪೀಡೆ ಮೊದಲಾದ ಕೀಟ ಬಾಧೆಗಳ ಬಗ್ಗೆ ವಿವರಿಸಿ ಕೀಟನಾಶಕಗಳು ಮಾತ್ರವಲ್ಲ ಜೈವಿಕ ವಿಧಾನಗಳ ಮೂಲಕ ಅವುಗಳನ್ನು ನಿಯಂತ್ರಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವಿಜ್ಞಾನಿಗಳೊಂದಿಗೆ ರೈತರು ಸಂವಾದ ನಡೆಸಿದರು.

ಉದ್ಘಾಟನೆ
ಮೂಡಬಿದಿರೆ ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮನಾಥ ಆಳ್ವ, ಸಿಇಒ
ಉದಯ ಹೆಗ್ಡೆ ಆಡಳಿತ ಮಂಡಳಿ ಸದಸ್ಯ ಸಂಪತ್‌ ಸಾಮ್ರಾಜ್ಯ, ಸಹಾಯಕ ಕೃಷಿ ಅಧಿಕಾರಿ ಪ್ರದೀಪ್‌ ಡಿ’ಸೋಜಾ
ಭಾಗವಹಿಸಿದ್ದರು. ಎಂಸಿಎಸ್‌ ಬ್ಯಾಂಕ್‌ ಸಿಇಒ ಚಂದ್ರಶೇಖರ ಎಂ., ಕೃ.ವಿ.ವಿ. ಕೇಂದ್ರದ ಉಪಾಧ್ಯಕ್ಷ ಸುಭಾಶ್ಚಂದ್ರ
ಚೌಟ ಉಪಸ್ಥಿತರಿದ್ದರು. ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿದರು. ಕೃ. ವಿ. ವಿ. ಕೇಂದ್ರದ ಜತೆ ಕಾರ್ಯದರ್ಶಿ ಸುಜಾತಾ ರಮೇಶ್‌ ನಿರೂಪಿಸಿದರು. ಕಾರ್ಯದರ್ಶಿ ಜಿನೇಂದ್ರ ಜೈನ್‌ ವಂದಿಸಿದರು.

Advertisement

ಮರಳಿ ಸಾವಯವದತ್ತ
ನೀರು ನಿಲ್ಲುವ ಗದ್ದೆಗಳು ನಾಶವಾಗಿ ಜಲಮೂಲ ಕ್ಷೀಣಿಸುತ್ತಿರುವುದು, ರಾಸಾಯನಿಕಗಳ ಎಗ್ಗಿಲ್ಲದ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಸ್ವಯಂಕೃತ ಅಪರಾಧಗಳಿಂದಾಗಿ ನಮ್ಮ ಭವಿಷ್ಯವನ್ನು ನಾವೇ ಹಾಳುಗೆಡಹುತ್ತಿದ್ದೇವೆ. ನಾವು ಮತ್ತೆ ಸಾವಯವದತ್ತ ಹೊರಳಿಕೊಳ್ಳಬೇಕಾಗಿದೆ.
ರಾಜವರ್ಮ ಬೈಲಂಗಡಿ,
  ಅಧ್ಯಕ್ಷ, ಕೃಷಿ ವಿಚಾರ ವಿನಿಮಯಕೇಂದ್ರ 

Advertisement

Udayavani is now on Telegram. Click here to join our channel and stay updated with the latest news.

Next