ತೆಂಗಿನ ನಾಡು ತುಮಕೂರಿಗೆ ತೆಂಗಿನ ತಾಜಾಎಣ್ಣೆಯ (ತೆಂತಾ ಎಣ್ಣೆ) ಪ್ರವೇಶವಾಗಿ ಒಂದು ದಶಕ ಕಳೆದಿದೆ. ಅದಕ್ಕೂ ಮುನ್ನ, ಮನೆಗೆ ಅಗತ್ಯವಿರುವಷ್ಟು ತೆಂಗಿನ ಎಣ್ಣೆಯನ್ನು ಕೆಲವರು ತೆಗೆಯುತ್ತಿದ್ದರು. ಆದರೆ, ಅದೊಂದು ಗೃಹೋದ್ಯಮವಾಗಿ ಬೆಳೆದಿದ್ದು ಈ ದಶಕದಲ್ಲಿ. ತೆಂಗು ಬೆಳೆಗಾರರು, ಸಾವಯವ ಕೃಷಿಕರು, ಆಟೋ ಚಾಲಕರು, ಯುವಕರು, ಗೃಹಿಣಿಯರು ಈ ಉದ್ಯಮಕ್ಕೆ ಕೈಹಾಕಿದರು. ಈಗ, ಜಿಲ್ಲೆಯಾದ್ಯಂತ 15ಕ್ಕೂ ಹೆಚ್ಚು ಕುಟುಂಬ ಕೇಂದ್ರಿತ ಉದ್ದಿಮೆಗಳಿವೆ. ವಾರ್ಷಿಕ, 10-15 ಸಾವಿರ ಲೀಟರ್ ತೆಂಗಿನೆಣ್ಣೆ ಉತ್ಪಾದನೆಯಾ ಗುತ್ತಿದೆ. ಈಗ ಇರುವ ಘಟಕಗಳೆಲ್ಲಾ, ಮನೆ ಅಥವಾ ತೋಟಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ.
500 ಲೀ. ತೆಂಗಿನೆಣ್ಣೆ: ತುರುವೇಕೆರೆ ತಾಲ್ಲೂಕು ಕೊಪ್ಪ ಗ್ರಾಮದ ನಾಗೇಶ್, 2009ರಲ್ಲಿ ಈ ಉದ್ಯಮಕ್ಕೆ ಕೈಹಾಕಿದರು. ತಿಂಗಳಿಗೆ 50 ಲೀಟರ್‌ನಿಂದ ಶುರುವಾದ ಈ ಉದ್ಯಮ, ಇದೀಗ 500 ಲೀಟರ್ ಮುಟ್ಟಿದೆ. ಪತ್ನಿ ಚಂದ್ರಕಲಾ ಹಾಗೂ ಒಬ್ಬ ನೌಕರ, ಇಡೀ ಕೆಲಸ ನಿರ್ವಹಿಸುತ್ತಾರೆ. ದಿನಕ್ಕೆ 20 ಲೀಟರ್ ತೆಂಗಿನೆಣ್ಣೆ ಉತ್ಪಾದನೆಯಾಗುತ್ತದೆ. ಇದಕ್ಕೆ, ತಿಂಗಳಿಗೆ 8-10 ಸಾವಿರ ಕಾಯಿ ಬೇಕಾಗುತ್ತದೆ. 50-60 ಲೀಟರ್ ಎಣ್ಣೆ, ಸ್ಥಳೀಯವಾಗಿ ಮಾರಾಟವಾಗುತ್ತದೆ. ಉಳಿದಿದ್ದು ತುಮಕೂರು, ಬೆಂಗಳೂರು, ಹಾಸನ, ಮೈಸೂರುಗಳಿಗೆ ರವಾನೆಯಾಗುತ್ತದೆ. ಎಲ್ಲಾ ವೆಚ್ಚ ಕಳೆದು, ತಿಂಗಳಿಗೆ 50 ಸಾವಿರದವರೆಗೆ ಉಳಿಕೆ.
ಇ
ನ್ನೊಂದು ಹೊಸ ಪ್ರಯತ್ನ: ತಿಪಟೂರಿನ ನಂಜುಂಡಯ್ಯ ಹಾಗೂ ಸ್ನೇಹಿತರು ಮಾಡಿರುವ ಪ್ರಯತ್ನ ಹೊಸತನದ್ದು. ಇವರು, ತಾಲೂಕಿನ ಮೂಗತಿಹಳ್ಳಿ ಹಾಗೂ ಕುಪ್ಪಾಳು ಗ್ರಾಮದಲ್ಲಿ ತೆಂತಾ ಜಾಬ್ ವರ್ಕ್ ಘಟಕ ಹಾಕಿದ್ದಾರೆ. ಇಲ್ಲಿ, ಯಾರು ಬೇಕಾದರೂ ತೆಂಗಿನ ಕಾಯಿ ತಂದು ಎಣ್ಣೆ ತೆಗೆಸಿಕೊಂಡು ಹೋಗಬಹುದು. ಪ್ರತಿ ಘಟಕಕ್ಕೆ ರೂ. 2 ಲಕ್ಷ ವೆಚ್ಚವಾಗಿದೆ. ಎಣ್ಣೆ ತೆಗೆದುಕೊಡಲು ರೂ. 60 ಚಾರ್ಜು ಮಾಡಲಾಗುತ್ತದೆ. ಮೈಸೂರು, ಕುಮಟಾ, ಕುಂದಾಪುರದಿಂದಲೂ ಕಾಯಿಗಳನ್ನು ತಂದು, ಎಣ್ಣೆ ತೆಗೆಸಿಕೊಂಡು ಹೋಗುತ್ತಿದ್ದಾರೆ. ಜಾಬ್ ವರ್ಕ್ ಸ್ಥಾಪಿಸುವ ಮೊದಲು, 2014ರಲ್ಲಿ ನಂಜುಂಡಯ್ಯನವರು 1460 ಕುಟುಂಬಗಳ ಎಣ್ಣೆ ಬೇಡಿಕೆ ಕುರಿತು ಸಮೀಕ್ಷೆ ನಡೆಸಿದ್ದರು. ಪ್ರತಿ ಕುಟುಂಬವು ಅಡುಗೆಗೆ, ದೇವರ ದೀಪಕ್ಕೆ, ಸ್ನಾನ ಇತ್ಯಾದಿಗಳಿಗೆ ಒಂದು ವರ್ಷಕ್ಕೆ ಎಷ್ಟು ಎಣ್ಣೆ ವ್ಯಯಿಸುತ್ತಾರೆ ಎಂಬುದನ್ನು ತಿಳಿಯುವುದು ಇದರ ಉದ್ದೇಶ. ಇಷ್ಟು ಕುಟುಂಬಗಳಲ್ಲಿ, ಒಂದು ಕೋಟಿ ಮೊತ್ತದ ಎಣ್ಣೆ ಕೊಳ್ಳುತ್ತಾರೆಂಬುದು ಸಮೀಕ್ಷೆಯಿಂದ ತಿಳಿದುಬಂದಿತ್ತು. ಮನೆಯಲ್ಲೇ ಎಣ್ಣೆ ತಯಾರಿಸಿಕೊಂಡರೆ, ಒಂದು ತಾಲೂಕಿನಲ್ಲೇ ಕೋಟ್ಯಂತರ ಮೊತ್ತ ಉಳಿಸಬಹುದು ಎಂಬ ಆಲೋಚನೆಯೊಂದಿಗೆ ಶುರುವಾಗಿದ್ದೇ, ತೆಂತಾ ಜಾಬ್ ವರ್ಕ್.
ಮಾರುಕಟ್ಟೆ ತಲುಪಿಲ್ಲ: ಇಷ್ಟೆಲ್ಲಾ ಉತ್ತಮ ಅಂಶಗಳಿದ್ದರೂ, ತೆಂತಾ ಎಣ್ಣೆ ಮುಖ್ಯವಾಹಿನಿ ಮಾರುಕಟ್ಟೆಯನ್ನು ತಲುಪಿಲ್ಲ. ಕಾರಣ ಹಲವು. ಏಳೆಂಟು ವರ್ಷಗಳಲ್ಲಿ ಅದರ ಬೆಲೆ ಎರಡು ಪಟ್ಟು ಹೆಚ್ಚಿದೆ (ರೂ. 250ರಿಂದ 500). ಬೇಡಿಕೆ ಕಡಿಮೆಯಾಗಲು ಗುಣಮಟ್ಟದ ಕೊರತೆಯೂ ಕಾರಣ ಎನ್ನುತ್ತಾರೆ ತುಮಕೂರಿನ ಗಂಗಾಧರಮೂರ್ತಿ. ಗುಣಮಟ್ಟ ವ್ಯತ್ಯಾಸಕ್ಕೆ ಪ್ರಮುಖ ಕಾರಣ, ಹೆಂಚಿನ ಮೇಲೆ ಹುರಿಯುವ ಪ್ರಕ್ರಿಯೆ. ಸ್ವಲ್ಪ ಉರಿ ಹೆಚ್ಚಾದರೂ ತೆಂಗಿನ ತುರಿ ಸೀದುಹೋಗುತ್ತದೆ. ಹೀಗಾದಾಗ, ಎಣ್ಣೆಯ ಪರಿಮಳ ಹಾಳು. ಹೀಗೆ ಆದಾಗ ಎಣ್ಣೆ ಬೇಗ ಕೆಡುವ ಸಾಧ್ಯತೆ ಹೆಚ್ಚು.
ಉದ್ದಿಮೆ ಆಗಿಸಲು ಸಕಾಲ: ಒಂದುಕಡೆ ನೀರಿನ ಕೊರತೆಯಿಂದ ತೆಂಗಿನ ತೋಟಗಳು ಒಣಗುತ್ತಿವೆ. ಇರುವ ತೋಟಗಳಿಗೂ ಹಲವು ರೋಗಗಳು. ಮತ್ತೂಂದು ಕಡೆ, ಅಡುಗೆ ಎಣ್ಣೆಯಲ್ಲಿ ಕಲಬೆರಕೆಯಾಗಿ ಆರೋಗ್ಯಕ್ಕೆ ಮಾರಕ ಪರಿಣಾಮ ಬೀರುತ್ತಿದೆ. ಈ ಎರಡೂ ಸಮಸ್ಯೆಗಳಿಗೆ ಉತ್ತರವಾಗಿ, ತೆಂತಾಎಣ್ಣೆ ಉದ್ದಿಮೆ ಬೆಳೆಸಬಹುದು. ರೈತರು, ತೆಂಗು ಅಭಿವೃದಿ ಮಂಡಳಿ, ತೋಟಗಾರಿಕೆ ಇಲಾಖೆ, ತೆಂಗು ಉತ್ಪಾದಕರ ಕಂಪನಿಗಳು ಒಟ್ಟಿಗೆ ಕುಳಿತು ಚರ್ಚಿಸಲು ಇದು ಸಕಾಲ.
* ಮಲ್ಲಿಕಾರ್ಜುನ ಹೊಸಪಾಳ್ಯ