Advertisement

ಶ್ರವಣಶಕ್ತಿ ನಷ್ಟ ಮತ್ತು ಕೊಕ್ಲಿಯಾರ್‌ ಇಂಪ್ಲಾಂಟ್‌ಗಳು

06:05 AM Mar 25, 2018 | |

ಹಿಂದಿನ ವಾರದಿಂದ- ಕೊಕ್ಲಿಯಾರ್‌ ಇಂಪ್ಲಾಂಟ್‌ ಹೊಂದಿರುವ ಮಕ್ಕಳ ನಿರ್ವಹಣೆ ಕೊಕ್ಲಿಯಾರ್‌ ಇಂಪ್ಲಾಂಟ್‌ ಅಳವಡಿಸಿರುವ ಮಕ್ಕಳು ಆಗಾಗ ಆಡಿಯಾಲಜಿಸ್ಟ್‌ ಮತ್ತು ಇಎನ್‌ಟಿ ತಜ್ಞರಿಂದ ತಪಾಸಣೆಗೆ ಒಳಗಾಗಬೇಕಾದುದು ಅಗತ್ಯ. ಆಡಿಯಾಲಜಿಸ್ಟ್‌ ಕೊಕ್ಲಿಯಾರ್‌ ಇಂಪ್ಲಾಂಟ್‌ನ ಪರಿಮಾಣಗಳನ್ನು ಪ್ರೋಗ್ರಾಮ್‌ ಮಾಡುತ್ತಾರೆ ಹಾಗೂ ಉಪಕರಣದ ಕಾರ್ಯಾಚರಣೆಯ ಬಗ್ಗೆ ನಿಗಾ ವಹಿಸುತ್ತಾರೆ. ಇಂಪ್ಲಾಂಟ್‌ ನಡೆಸಿದ ಬಳಿಕ ಮಾತಿನ ಗ್ರಹಣದಲ್ಲಿ ಆಗಿರುವ ಪ್ರಗತಿಯನ್ನೂ ಆಡಿಯಾಲಜಿಸ್ಟ್‌ ಪರಿಶೀಲಿಸುತ್ತಾರೆ. ಇಂಪ್ಲಾಂಟ್‌ಗೆ ಒಳಗಾದ ಮಗು ಅಥವಾ ವಯಸ್ಕರ ವೈದ್ಯಕೀಯ ಸ್ಥಿತಿಯನ್ನು ಗಮನಿಸಲು ಇಎನ್‌ಟಿ ವೈದ್ಯರಿಂದ ವೈದ್ಯಕೀಯ ವಿಶ್ಲೇಷಣೆಯೂ ಅಗತ್ಯ. 

Advertisement

ಕೊಕ್ಲಿಯಾರ್‌ ಇಂಪ್ಲಾಂಟ್‌ಗೆ ಒಳಗಾದ ಬಳಿಕ ಅದರಿಂದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ಮಕ್ಕಳಿಗೆ ತರಬೇತಿ ಒದಗಿಸುವುದು ಒಂದು ಪ್ರಮುಖ ಅಂಶ. ಈ ಪುನಶ್ಚೇತನ ತರಬೇತಿಯು ಅರ್ಥಸಂಬದ್ಧ ಸಂವಹನ ಸನ್ನಿವೇಶಗಳಲ್ಲಿ ಶ್ರವಣ ಸ್ವಭಾವಗಳನ್ನು ಬೆಳೆಸುವುದನ್ನು ಅವಶ್ಯವಾಗಿ ಒಳಗೊಂಡಿರಬೇಕಾಗಿದೆ. ಸಾಮಾನ್ಯವಾಗಿ ಸ್ಪೀಚ್‌ ಪೆಥಾಲಜಿಸ್ಟ್‌ಗಳು ಆಡಿಯಾಲಜಿಸ್ಟ್‌ ಗಳ ಜತೆಗೆ ಸಮಾಲೋಚನೆ ನಡೆಸಿ ಇಂಪ್ಲಾಂಟ್‌ಗೆ ಒಳಗಾದ ಮಕ್ಕಳು ಗರಿಷ್ಠ ಪ್ರಯೋಜನ ಪಡೆಯುವುದಕ್ಕೆ ನೆರವಾಗುತ್ತಾರೆ. 

ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನ ಅತ್ತಾವರ ಶಾಖೆಯಲ್ಲಿರುವ ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ವಿಭಾಗವು ಮಾತು ಮತ್ತು ಶ್ರವಣ ಸಂಬಂಧಿ ಸಮಸ್ಯೆಗಳ ಕುರಿತಾಗಿ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಮಾತ್ರವಲ್ಲದೆ ಮಾತು ಮತ್ತು ಶ್ರವಣ ಸಂಬಂಧಿ ತೊಂದರೆಗಳನ್ನು ಹೊಂದಿರುವವರಿಗೆ ನೆರವಾಗುವ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನೂ ಕೈಗೊಳ್ಳುತ್ತಿದೆ. ನಮ್ಮ ಈ ಕೇಂದ್ರದಲ್ಲಿ ನಾವು ಮಾತು ಮತ್ತು ಶ್ರವಣ ಸಮಸ್ಯೆಗಳನ್ನು ಗುರುತಿಸುವುದು, ವಿಶ್ಲೇಷಣೆ ನಡೆಸುವುದು ಮತ್ತು ಪುನಶ್ಚೇತನ ಒದಗಿಸುವ ಸೇವೆಗಳನ್ನು ನೀಡುತ್ತಿದ್ದೇವೆ. 

ಕೇಂದ್ರ ಸರಕಾರದ ಯೋಜನೆಯಡಿ ಕೊಕ್ಲಿಯಾರ್‌ ಇಂಪ್ಲಾಂಟ್‌ ನಡೆಸುವ ಎಡಿಐಪಿ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ನಮ್ಮ ಕೇಂದ್ರವನ್ನೂ ಒಂದಾಗಿ ಗುರುತಿಸಲಾಗಿದೆ. 2006ರಿಂದೀಚೆಗೆ ಕೊಕ್ಲಿಯಾರ್‌ ಇಂಪ್ಲಾಂಟ್‌ ಕಾರ್ಯಕ್ರಮ ಮತ್ತು ಈಗ 2016ರಿಂದ ಈಚೆಗೆ ಎಡಿಐಪಿ ಯೋಜನೆಯಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಈ ಯೋಜನೆಯಡಿ ಕೊಕ್ಲಿಯಾರ್‌ ಇಂಪ್ಲಾಂಟ್‌ ಅಳವಡಿಕೆಯನ್ನು ಕೇಂದ್ರ ಸರಕಾರದ ವತಿಯಿಂದ ಉಚಿತವಾಗಿ ನಡೆಸಲಾಗುತ್ತದೆ, ಆದರೆ ಅಳವಡಿಕೆಗೆ ಅರ್ಹತೆಯ ವಿಶ್ಲೇಷಣೆಗೆ ತಗಲುವ ವೆಚ್ಚವನ್ನು ಕೊಕ್ಲಿಯಾರ್‌ ಅಳವಡಿಕೆಗೆ ಒಳಗಾಗುವವರೇ ಭರಿಸಬೇಕಾಗುತ್ತದೆ. ಪ್ರಸ್ತುತ ಈ ಸೇವೆಗಳು ಆರು ವರ್ಷ ವಯಸ್ಸಿನೊಳಗಿನ, ಮಾಸಿಕ ಆದಾಯವು ರೂ. 15,000ಕ್ಕಿಂತ ಕಡಿಮೆ ಇರುವ ಕುಟುಂಬದ ಮಕ್ಕಳಿಗೆ ಲಭ್ಯವಿವೆ. ನಮ್ಮ ವಿಭಾಗದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ. ನಾವು ಸರಕಾರಿ ವೆನಾÉಕ್‌ ಆಸ್ಪತ್ರೆಯಲ್ಲಿ ರಾಜ್ಯ ಸರಕಾರದ ಕೊಕ್ಲಿಯಾರ್‌ ಇಂಪ್ಲಾಂಟ್‌ ತಂಡದ ಭಾಗವೂ ಆಗಿದ್ದೇವೆ. ಇದಲ್ಲದೆ, ಎಡಿಐಪಿ ಯೋಜನೆಯಡಿ ಶ್ರವಣ ಸಾಧನಗಳು ಸರಕಾರಿ ವೆನಾÉಕ್‌ ಆಸ್ಪತ್ರೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿಯೂ ಲಭ್ಯವಿವೆ. 

ಶ್ರವಣ ವೈಕಲ್ಯವುಳ್ಳವರಲ್ಲಿ ಸಂವಹನ ಕೌಶಲಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾದಷ್ಟು ಎಳೆಯ ವಯಸ್ಸಿನಲ್ಲಿ ಸರಿಯಾದ ಸಮಯಕ್ಕೆ ಆಡಿಯಾಲಜಿಸ್ಟ್‌ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ ಎಂಬುದು ನಿಮ್ಮ ಗಮನದಲ್ಲಿ ಸದಾ ಇರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next