Advertisement

ಕರಾವಳಿ: ಸಂಪೂರ್ಣ ಶಾಂತಿಯುತ ಪ್ರಕ್ರಿಯೆ 

02:20 PM Apr 04, 2018 | Team Udayavani |

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಿತವಾದ ಈ ಪ್ರದೇಶ ಕಡಲು- ಮಲೆನಾಡ ಸಂಗಮ. ಒಂದೆಡೆ ಭೋರ್ಗರೆಯುವ ಸಮುದ್ರ. ಇನ್ನೊಂದೆಡೆ ಪಶ್ಚಿಮಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿ. ನಡುವೆ ಇರುವ ಅವಿಭಜಿತ ಜಿಲ್ಲೆ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಭೌಗೋಳಿಕವಾಗಿ ವಿಭಜನೆಯಾದರೂ ಉಭಯ ಜಿಲ್ಲೆಗಳು ಭಾವನಾತ್ಮಕವಾಗಿ ಒಂದೇ ಆಗಿವೆ.

Advertisement

ದೇಶದ ಸ್ವಾತಂತ್ರ್ಯ  ಹೋರಾಟದಲ್ಲಿ ಈ ಜಿಲ್ಲೆಯ ಜನತೆ ಸಕ್ರಿಯವಾಗಿ ಭಾಗವಹಿಸಿದವರು. ತನು, ಮನ, ಧನ ಅರ್ಪಿಸಿದವರು. ಜಿಲ್ಲೆಯ ಎಲ್ಲ ಸ್ವಾತಂತ್ರ್ಯ  ಸೇನಾನಿಗಳನ್ನು ಸಂಕೇತಿಸುವಂತೆ ಕಾರ್ನಾಡ್‌ ಸದಾಶಿವ ರಾಯರ ಹೆಸರನ್ನು ಇಲ್ಲಿ ಉಲ್ಲೇಖೀಸಬಹುದು. ಮಹಾತ್ಮಾ ಗಾಂಧೀಜಿ ಮೂರು ಬಾರಿ ಇಲ್ಲಿಗೆ ಬಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ತಾತ್ಕಾಲಿಕ ಸ್ವರೂಪದ ಸರಕಾರವಿತ್ತು. ಚುನಾವಣೆ ನಡೆಯುತ್ತಿತ್ತು. ಜಿಲ್ಲೆಯ ಜನತೆ ಆಗಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಹೀಗೆ ಚುನಾವಣಾ ಪ್ರಜಾತಾಂತ್ರಿಕತೆಗೆ ಇಲ್ಲಿನ ಜನತೆ ಸದಾ ಸ್ಪಂದಿಸುವವರು.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಆರಂಭದಲ್ಲಿ ಮದ್ರಾಸ್‌ ಪ್ರಾಂತದಲ್ಲಿ ಈ ಪ್ರದೇಶವಿದ್ದರೂ ಮುಂದೆ ಮೈಸೂರು (ಈಗ ಕರ್ನಾಟಕ) ರಾಜ್ಯಕ್ಕೆ ಸೇರ್ಪಡೆಯಾಯಿತು.

ಚುನಾವಣೆಗಳಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳುವುದು ಇಲ್ಲಿನ ಪರಂಪರೆ. ಹಾಗೆಂದು ಅನಪೇಕ್ಷಿತ ಘಟನೆಗಳು ನಡೆದಿಲ್ಲವೆಂದಲ್ಲ. ಆದರೆ, ಅವೆಲ್ಲ ನಿಜ ಅರ್ಥದಲ್ಲಿ ಸಣ್ಣಪುಟ್ಟ ಎಂಬಂಥ ಸಂಗತಿಗಳು. ತೀವ್ರ ಸ್ವರೂಪದ್ದಾಗಿ ಪೊಲೀಸ್‌ ಠಾಣೆಗಳಲ್ಲಿ ದಾಖಲುಗೊಂಡ ಪ್ರಸಂಗಗಳು ತೀರಾ ವಿರಳ. ದೇಶದ ವಿವಿಧೆಡೆಯ ಚುನಾವಣಾ ಸಂದರ್ಭದ ಘಟನೆಗಳಿಗೆ ಹೋಲಿಸಿದರೆ, ಇಲ್ಲಿನದು ಸಂಪೂರ್ಣ ಶಾಂತಿಯುತ ಮತ್ತು ಆದರ್ಶಯುತ ಚುನಾವಣಾ ಪ್ರಕ್ರಿಯೆ. ಲೋಕಸಭಾ- ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪುನರ್ವಿಂಗಡನೆಯ ಪ್ರಕ್ರಿಯೆ ಇಲ್ಲಿಯೂ ನಡೆದಿದೆ. ಆದರೆ, ಒಟ್ಟು ಮತದಾನದ ಕಾರ್ಯಕ್ಕೆ ಇದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ.

ಅಂದ ಹಾಗೆ…
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ವಿಧಾನಸಭಾ ಕ್ಷೇತ್ರಗಳು ಕರಾವಳಿಯ ಕ್ಷೇತ್ರಗಳಷ್ಟೇ ಆಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಆಗಿನ ಮಂಗಳೂರು ಕ್ಷೇತ್ರದಲ್ಲಿ ಕೊಡಗಿನ ಮೂರು ಕ್ಷೇತ್ರಗಳಿದ್ದವು. ಈಗಿನ ಉಡುಪಿ ಕ್ಷೇತ್ರವು ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಎಂದಾಗಿದೆ. ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದೆ!

Advertisement

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next