ಮುಂಬಯಿ: ಕೋಸ್ಟಲ್ ರೋಡ್ ಯೋಜನೆಯ ನಿರ್ಮಾಣದ ಮೇಲೆ ಬಾಂಬೆ ಹೈಕೋರ್ಟ್ ಹೇರಿದ್ದ ತಡೆಯಾಜ್ಞೆ ಆದೇಶವನ್ನು ಸೋಮವಾರ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯದಿಂದ ನೆಮ್ಮದಿ ಸಿಗುತ್ತಿದ್ದಂತೆಯೇ ಬೃಹನ್ಮುಂಬಯಿ ಮಹಾನಗರ ಪಾಲಿಕೆಯು (ಬಿಎಂಸಿ) ಅಮರ್ಸನ್ ಗಾರ್ಡನ್‌ನಲ್ಲಿ ಯೋಜನೆಯ ಕೆಲಸವನ್ನು ಪುನರಾರಂಭಿಸಿದೆ.
ಬಾಂಬೆ ಹೈಕೋರ್ಟ್ ತನ್ನ ಎ. 23ರ ಆದೇಶದಲ್ಲಿ ಕೋಸ್ಟಲ್ ರೋಡ್ ಯೋಜನೆಯ ಕೆಲಸಗಳ ಮೇಲೆ ಸಂಪೂರ್ಣವಾಗಿ ತಡೆಯನ್ನು ಹೇರಿತ್ತು. ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ಎಪ್ರಿಲ್‌ನ ಆದೇಶವನ್ನು ಬದಲಾಯಿಸಿದ್ದು, ಯಾವುದೇ ಹೊಸ ಪ್ರದೇಶದಲ್ಲಿ ಯಾವುದೇ ಹೊಸ ಕೆಲಸವನ್ನು ಕೈಗೆತ್ತಿಕೊಳ್ಳಬಾರದೆಂಬ ಷರತ್ತಿನ ಮೇರೆಗೆ ಈಗಾಗಲೇ ಪ್ರಾರಂಭವಾಗಿರುವ ಕೆಲಸವನ್ನು ಮುಂದುವರಿಸಲು ಅದು ಗುತ್ತಿಗೆದಾರರಿಗೆ ಅವಕಾಶವನ್ನು ನೀಡಿದೆ. ಕರಾವಳಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾರಂಭವಾಗಿರುವ ಕೆಲಸವನ್ನು ಗುತ್ತಿಗೆದಾರರು ಮತ್ತು ಬಿಎಂಸಿ ತಮ್ಮ ಸ್ವಂತ ಅಪಾಯದ ಮೇಲೆ ಪೂರ್ಣಗೊಳಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖೀಸಲಾಗಿರುವ ಅಂಶಗಳನ್ನು ನಾವು ಅನುಸರಿಸಲಿದ್ದೇವೆ ಮತ್ತು ಅದರ ಪ್ರಕಾರವಾಗಿ ಕೆಲಸವನ್ನು ಕೈಗೆತ್ತಿಕೊÛಲಾಗುವುದು ಎಂದು ಕೋಸ್ಟಲ್ ರೋಡ್ ಯೋಜನೆಯ ಮುಖ್ಯ ಎಂಜಿನಿಯರ್ ಮೋಹನ್ ಮಚಿವಾಲಾ ತಿಳಿಸಿದ್ದಾರೆ. ಈ ಯೋಜನೆಯು ನಗರದ ಸಮುದ್ರ ಕರಾವಳಿಯ ಪರಿಸರ ವಿಜ್ಞಾನದ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರು ಮತ್ತು ಸೊಸೈಟಿ ಫಾರ್ ಇಂಪ್ರೂವ್‌ಮೆಂಟ್ ಆಫ್ ಗೀನರಿ ಆ್ಯಂಡ್ ನೇಚರ್ ಎಂಬ ಎನ್‌ಜಿಒ ಕಡೆಯಿಂದ ಕೋಸ್ಟಲ್ ರೋಡ್ ಯೋಜನೆಯ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಲಾಗಿತ್ತು. ಎಪ್ರಿಲ್‌ನಲ್ಲಿ ಹೈಕೋರ್ಟ್ ಭುಲಾಭಾಯಿ ದೇಸಾಯಿ ರಸ್ತೆಯ ಅಮರ್ಸನ್ ಉದ್ಯಾನದಲ್ಲಿ ಮರಗಳ ಕತ್ತರಿಸುವಿಕೆ ಹಾಗೂ ಯೋಜನೆಯ ಪರಿಸರ ಅನುಮತಿಯ ಕೊರತೆಯ ವಿರುದ್ಧವಾಗಿ ಸಲ್ಲಿಸಲಾದ ಅರ್ಜಿಯ ಮೇಲೆ ವಿಚಾರಣೆ ನಡೆಸಿತು ಮತ್ತು ಜೂ.3ರ ತನ್ನ ಮುಂದಿನ ಆದೇಶದ ತನಕ ಯೋಜನೆಯ ಕೆಲಸಗಳನ್ನು ಮುಂದುವರಿಸದಂತೆ ಬಿಎಂಸಿಗೆ ತಡೆಯನ್ನು ಹೇರಿತ್ತು. ಇದಾದ ಬಳಿಕ ಕೆಲಸ ಮುಂದುವರಿಸಲು ಅನುಮತಿಯನ್ನು ಕೋರಿ ಬಿಎಂಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಜೂನ್‌ನಲ್ಲಿ ಹೇಗೂ ವಿಚಾರಣೆ ನಡೆಯಲಿಕ್ಕಿದ್ದು, ಅಲ್ಲಿಯ ತನಕ ಕೆಲಸದ ಮೇಲೆ ತಡೆ ಹೇರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಉಪನಗರಗಳಿಗೆ ಸಂಪರ್ಕ
ಮಹತ್ವಾಕಾಂಕ್ಷೆಯ 29.2 ಕಿ.ಮೀ. ಉದ್ದದ ಕೋಸ್ಟಲ್ ರೋಡ್ ಯೋಜನೆಯು ಸುರಂಗಗಳ ಸಂಯೋಜನೆ, ಸಮುದ್ರದಲ್ಲಿ ಭೂಮಿಯ ಪುನಃಸ್ಥಾಪನೆ ಮತ್ತು ಎಲೆವೇಟೆಡ್ ರಸ್ತೆಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಕರಾವಳಿಯ ಉಪನಗರಗಳಿಗೆ ಸಂಪರ್ಕಿಸಲಿದೆ. ಬಿಎಂಸಿಯ ಯೋಜನೆಗಳ ಪ್ರಕಾರ, ಇದು ಪ್ರಿನ್ಸೆಸ್ ಸ್ಟ್ರೀಟ್, ಮರೀನ್ ಲೈನ್ಸ್‌ನಿಂದ ಪ್ರಾರಂಭವಾಗಿ ಉಪನಗರ ಕಾಂದಿವಲಿಗೆ ಜೋಡಣೆಯಾಗಲಿದೆ. ಇದು ಎರಡು ಮೀಸಲಾದ ಬಸ್ ಲೇನ್‌ಗಳೊಂದಿಗೆ ಎಂಟು ಲೇನ್‌ಗಳನ್ನು ಹೊಂದಿರಲಿದೆ.