Advertisement

ನೆಲ್ಲಿಕುನ್ನು ಮಾದರಿಯಲ್ಲಿ ಕಡಲ್ಕೊರೆತ ತಡೆ: ಸಚಿವ ಅಂಗಾರ

02:04 AM Jun 16, 2022 | Team Udayavani |

ಉಳ್ಳಾಲ: ಕರಾವಳಿಯ ಕಡಲ್ಕೊರೆತ ಸಮಸ್ಯೆಗೆ ಕಾಸರಗೋಡಿನ ನೆಲ್ಲಿಕುನ್ನು ಮಾದರಿಯಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಿದ್ದು, ಮುಖ್ಯಮಂತ್ರಿಯವರು ಮೌಖೀಕ ಒಪ್ಪಿಗೆ ನೀಡಿದ್ದಾರೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ನೆಲ್ಲಿಕುನ್ನು ಪ್ರದೇಶಕ್ಕೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಳಿಕ ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಸಚಿವರು ಮಾತನಾಡಿದರು. ಸೋಮೇಶ್ವರ ಉಚ್ಚಿಲ ಸೇರಿದಂತೆ ಇಲ್ಲಿನ ಕಡಲ್ಕೊರೆತಕ್ಕೆ ಈ ಮಳೆಗಾಲ ದಲ್ಲಿ ತಾತ್ಕಾಲಿಕ ಕ್ರಮವಾಗಿ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದರು.

3 ದಿನಗಳಲ್ಲಿ ಸಿಎಂಗೆ ವರದಿ
ಕರಾವಳಿಯ ಕಡಲ್ಕೊರೆತ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆ. ಆಗ ಸಮಸ್ಯೆಗೆ ಸಂಬಂಧಿಸಿದಂತೆ ತ್ವರಿತ ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದರೂ ಬಂದರು ಇಲಾಖೆಯ ನಿರ್ದೇಶಕ ಸ್ವಾಮಿ ಹಾಗೂ ಮುಖ್ಯ ಅಭಿಯಂತ ರಾಥೋಡ್‌ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಮೂರು ದಿನಗಳೊಗೆ ಎಲ್ಲ ವಿವರಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದೇವೆ ಎಂದರು.

ಸ್ಥಳೀಯ ಮೀನುಗಾರರು ಇಲ್ಲಿನ ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಕಾಸರಗೋಡಿನ ನೆಲ್ಲಿಕುನ್ನು ತಂತ್ರಜ್ಞಾನದ ಬಗ್ಗೆ ನನಗೆ ವಿಶ್ವಾಸವಿದ್ದು, ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next