Advertisement

Train; ಕರಾವಳಿ-ಅಯೋಧ್ಯೆಗೆ ನೇರ ರೈಲು ಸಂಪರ್ಕ ಬೇಡಿಕೆ: ರಾಮಜನ್ಮ ಭೂಮಿಗೆ ಕರಾವಳಿಗರ ದಂಡು

12:48 AM Jan 10, 2024 | Team Udayavani |

ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆಗೆ ದಿನ ನಿಗದಿಯಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಜನರು ಹೋಗ ತೊಡಗಿದ್ದಾರೆ. ಆದರೆ ಕರಾವಳಿ ಭಾಗದವರು ಅಯೋಧ್ಯೆಗೆ ತೆರಳಲು ಸುತ್ತಿ ಬಳಸಿ ಹೋಗಬೇಕು. ಪ್ರಸ್ತುತ ಯಾವುದೇ ನೇರ ರೈಲುಗಳು ಇಲ್ಲದಿರುವುದೇ ದೊಡ್ಡ ಅಡಚಣೆಯಾಗಿದೆ.

Advertisement

ರಾಮ ಮಂದಿರದ ಉದ್ಘಾಟನೆ ಆದ ಬಳಿಕ ಕರಾವಳಿ ಭಾಗದಿಂದ ಅಲ್ಲಿಗೆ ತೆರಳುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ರೈಲ್ವೇ ಇಲಾಖೆ ನೇರ ಎಕ್ಸ್‌ಪ್ರೆಸ್‌ ರೈಲು ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂಬುದು ಕರಾವಳಿಗರ ಆಗ್ರಹ.

ಕೇಂದ್ರ ಸರಕಾರವು ಈಗಾಗಲೇ ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮೂಲಕ ಅಯೋಧ್ಯೆಗೆ ರೈಲು ಸಂಪರ್ಕ ಮಾಡಲು ಉದ್ದೇಶಿಸಿದೆ. ಅದೇ ರೀತಿ ಕರಾವಳಿಯನ್ನೂ ಅಯೋಧ್ಯೆ ಜತೆಗೆ ಸಂಪರ್ಕ ಮಾಡಬೇಕಿದೆ.

ನೇರ ಸಂಪರ್ಕಕ್ಕೆ ಆಗ್ರಹ
ಈಗಾಗಲೇ ಬೆಂಗಳೂರಿನಿಂದ ಅಯೋಧ್ಯೆಗೆ ಕಾಶಿ-ತಮಿಳ್‌ ಸಂಗಮ ಎಕ್ಸ್‌ಪ್ರೆಸ್‌ ಆರಂಭವಾಗಿದೆ. ವಿಶಾಖಪಟ್ಟಣ- ಗೋರಖಪುರ ಎಕ್ಸ್‌ಪ್ರೆಸ್‌, ನಾಗರಕೋಯಿಲ್‌ (ತಮಿಳುನಾಡು)-ಅಯೋಧ್ಯೆ ಎಕ್ಸ್‌ಪ್ರೆಸ್‌ ಆರಂಭ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಅಯೋಧ್ಯೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನೇರ ಸಂಪರ್ಕ ವ್ಯವಸ್ಥೆ ಇಲ್ಲ. ಕರಾವಳಿ ಭಾಗದವರು ಮುಂಬಯಿಗೆ ತೆರಳಿ ಅಲ್ಲಿಂದ ಅಯೋಧ್ಯೆಗೆ ತೆರಳಬೇಕು. ಇಲ್ಲವೇ ಬೆಂಗಳೂರಿಗೆ ತೆರಳಿ ರೈಲುಗಳನ್ನು ಬಳಸಬೇಕು. ಇದರಿಂದ ಸಮಯ ವ್ಯರ್ಥದ ಜತೆಗೆ ವೆಚªವೂ ಹೆಚ್ಚಳವಾಗಲಿದೆ.

ವಾರಕ್ಕೊಂದು ರೈಲು ಬೇಡಿಕೆ
ನಾಗರಕೋಯಿಲ್‌ (ತಮಿಳುನಾಡು) -ಅಯೋಧ್ಯೆ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ ನಿಲ್ದಾಣದ ಮೂಲಕ ಹಾದುಹೋಗಲಿದ್ದರೂ ಇದರಿಂದ ಕರಾವಳಿಯ ಪ್ರಯಾಣಿಕರಿಗೆ ಪ್ರಯೋಜನವಿಲ್ಲ. ಈ ರೈಲು ಕೇರಳ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಹೆಚ್ಚಿನ ಸೀಟುಗಳನ್ನು ಅಲ್ಲಿನವರೇ ಕಾಯ್ದಿರಿಸುವುದರಿಂದ ಕರಾವಳಿಗರಿಗೆ ಸೀಟು ಸಿಗುವುದೇ ಅತ್ಯಲ್ಪ. ಕನಿಷ್ಠ ವಾರದಲ್ಲಿ ಒಂದು ದಿನವಾದರೂ ಕರಾವಳಿ ಭಾಗದಿಂದ ಉಡುಪಿ ಮಾರ್ಗವಾಗಿ ಅಯೋಧ್ಯೆಗೆ ನೇರ ರೈಲು ಸಂಪರ್ಕ ಒದಗಿಸಬೇಕು ಎಂಬುದು ಕರಾವಳಿಗರ ಆಗ್ರಹ.

Advertisement

ಬೇಕಿದೆ ಸಂಪರ್ಕ ಕೊಂಡಿ
ಕರಾವಳಿ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಉತ್ತರ ಭಾರತದ ಕಾರ್ಮಿಕರಿದ್ದಾರೆ. ಅಯೋಧ್ಯೆ ಯಷ್ಟೇ ಅಲ್ಲದೆ, ಕಾಶಿ, ಪ್ರಯಾಗ್‌ಗೆ ಕೂಡ ಅದೇ ರೈಲನ್ನು ವಿಸ್ತರಿಸಬಹುದು. ಝಾನ್ಸಿ ಸಹಿತ ಅಯೋಧ್ಯೆಯ ಸುತ್ತಮುತ್ತಲಿನ ಧಾರ್ಮಿಕ, ಪ್ರವಾಸಿ ತಾಣಗಳನ್ನು ವೀಕ್ಷಿಸಲೂ ಇದು ಸಹಕಾರಿ. ಜತೆಗೆ ಉತ್ತರ ಭಾರತದ ಕಾರ್ಮಿಕರಿಗೂ ಅನುಕೂಲವಾಗಲಿದೆ. ಅಯೋಧ್ಯೆಯ ಹೆಸರಿನಲ್ಲಿ ಈ ಸೇವೆ ಕರಾವಳಿಯ ಜನತೆಗೆ ಸಿಗುವಂತಾಗಲಿ ಎಂಬುವುದು ಜನರ ಆಶಯ.

ಮುಂದಿನ ವರ್ಷ ಪ್ರಸ್ತಾವನೆ
ಕರಾವಳಿ ಭಾಗದಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಹಲವು ಮನವಿಗಳು ಬಂದಿವೆ. ಸದ್ಯಕ್ಕೆ ಆ ಪ್ರಸ್ತಾವನೆ ಇಲ್ಲ. 2025ರ ಆರ್ಥಿಕ ವರ್ಷದಲ್ಲಿ ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗುವುದು.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ರೈಲ್ವೇ ಇಲಾಖೆಗೆ ಪತ್ರ
ಕರಾವಳಿಗರಿಗೆ ಅಯೋಧ್ಯೆಗೆ ತೆರಳಲು ನೇರ ಸಂಪರ್ಕದ ರೈಲು ಬೇಕು. ನಾವು ಶೀಘವೇ ರೈಲ್ವೇ ಇಲಾಖೆಗೆ ಈ ಕುರಿತು ಪತ್ರ ಬರೆಯಲಿದ್ದೇವೆ.
– ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ.

ಬೇಡಿಕೆ ಈಡೇರುವ ನಿರೀಕ್ಷೆ
ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಕರಾವಳಿಯ ಪಾತ್ರ ಮಹತ್ವದ್ದು. ಹಾಗಾಗಿ ಇಡೀ ಕರಾವಳಿಯಿಂದ ಅಯೋಧ್ಯೆಗೆ ನೇರ ರೈಲು ಸಿಗುವುದು ಭಾವನಾತ್ಮಕವಾಗಿ ಕೂಡ ಕರಾವಳಿಗರಿಗೆ ಮುಖ್ಯ. ಈಗ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ ಸದಸ್ಯರೂ ಆದ ಪೇಜಾವರ ಶ್ರೀಗಳ ಮೂಲಕ ಕೃಷ್ಣನೂರು ರಾಮನೂರಿನ ಜತೆ ಬೆಸೆಯುವ ನಿರೀಕ್ಷೆ ಇದೆ.
-ಪೃಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ಪ್ರಮುಖರು, ಕರಾವಳಿ ರೈಲು ಹಿತರಕ್ಷಣ ಸಮಿತಿ

 

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next