Advertisement

ಕರಾವಳಿ: 2,756 ಶಿಕ್ಷಕರ ಕೊರತೆ!ಹುದ್ದೆ ಭರ್ತಿಗೆ ಮೀನಾಮೇಷ

12:44 AM Jul 18, 2023 | Team Udayavani |

ಮಂಗಳೂರು: ಸರಕಾರಿ ಶಾಲೆ ಅಭಿವೃದ್ಧಿಗೆ ಆದ್ಯತೆ ಎಂದು ಸರಕಾರ ಹೇಳುತ್ತಲೇ ಇದೆ; ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2,756 ಶಿಕ್ಷಕರ ಕೊರತೆಯಿದೆ!

Advertisement

ಉಭಯ ಜಿಲ್ಲೆಗಳ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ ಎಂಬ ಆತಂಕದ ಮಧ್ಯೆಯೇ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮುಖ್ಯವಾದ ಶಿಕ್ಷಕರ ನೇಮಕಾತಿಯೇ ಪೂರ್ಣವಾಗಿ ನಡೆಯದಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆಗಳ ಪೈಕಿ 4,447 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 2,916 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ, 1,531 ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 1,404 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 340 ಹುದ್ದೆ ಖಾಲಿ ಇವೆ.

ಉಡುಪಿ ಜಿಲ್ಲೆಯ ಪ್ರಾಥಮಿಕ ಶಾಲೆಗಳ 2,425 ಹುದ್ದೆಗಳ ಪೈಕಿ 1,744 ಮಂದಿ ಕರ್ತವ್ಯದಲ್ಲಿದ್ದು, 681 ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 1,053 ಹುದ್ದೆಗಳು ಮಂಜೂರಾಗಿದ್ದು, 204 ಹುದ್ದೆ ಖಾಲಿ ಇವೆ.

ಎರಡೂ ಜಿಲ್ಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಸರಿದೂಗಿಸಲು ಇಲಾಖೆಯು ಅತಿಥಿ ಶಿಕ್ಷಕರ ನೇಮಕದಂತಹ ತಾತ್ಕಾಲಿಕ ಕ್ರಮ ಗಳನ್ನು ಕೈಗೊಂಡಿದೆ. ಆದರೆ ಹುದ್ದೆಗಳ ಭರ್ತಿಗೆ ಮಾತ್ರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.

Advertisement

ಈ ಬಗ್ಗೆ ಶಿಕ್ಷಣ ಇಲಾಖೆ ಅಧಿ ಕಾರಿಗಳನ್ನು ವಿಚಾರಿಸಿದಾಗ ಶಿಕ್ಷಕರ ನೇಮಕ ವಿಚಾರ ರಾಜ್ಯ ಮಟ್ಟದಲ್ಲಿ ಆಗುವಂತಹುದು. ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಗೆ ಖಾಲಿ ಇರುವ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎನ್ನುತ್ತಾರೆ. ಪ್ರೌಢಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಸರಕಾರಿ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಇಲಾಖಾ ಪ್ರಮುಖರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನು ಗುಣವಾಗಿ ಶಿಕ್ಷಕರ ನೇಮಕ ಆಗದೆ ಶೈಕ್ಷಣಿಕ ಚಟುವಟಿಕೆಗೆ ಸಮಸ್ಯೆ ಎದುರಾಗಿದೆ. ಈ ಪೈಕಿ 6, 7 ಹಾಗೂ 8ನೇ ತರಗತಿಗೆ ಕೆಲವು ಹೊಸ ಶಿಕ್ಷಕರು ಬರುವುದಾದರೂ 1ರಿಂದ 5ನೇ ತರಗತಿಗಳ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಕವೂ ತುರ್ತಾಗಿ ನಡೆಯಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಆಗ್ರಹಿಸಿದ್ದಾರೆ.

ಉಭಯ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಇಲಾಖೆ ಪೂರಕ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 6ರಿಂದ 8ನೇ ತರಗತಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಕೊನೆಯ ಹಂತದಲ್ಲಿದೆ.
– ದಯಾನಂದ ನಾಯಕ್‌, ಗಣಪತಿ ಕೆ.
ಡಿಡಿಪಿಐ, ದ.ಕ. ಹಾಗೂ ಉಡುಪಿ

784 ಶಿಕ್ಷಕರ ನೇಮಕ:
ಅಂತಿಮಕ್ಕೆ ಇನ್ನೆಷ್ಟು ಸಮಯ?
ಬಹುನಿರೀಕ್ಷಿತ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆ ಸಂಬಂಧ 1:1 ಪ್ರಮಾಣದ ತಾತ್ಕಾಲಿಕ ಆಯ್ಕೆ ಪಟ್ಟಿ ಈಗಾಗಲೇ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 526 ಹಾಗೂ ಉಡುಪಿ ಜಿಲ್ಲೆಗೆ 258 ಸಹಿತ ಒಟ್ಟು 784 ಹೊಸ ಶಿಕ್ಷಕರು ಸೇರ್ಪಡೆಯಾಗಲಿದ್ದಾರೆ. ಈ ಎಲ್ಲ ಶಿಕ್ಷಕರ ಅಂತಿಮ ಪಟ್ಟಿ ಆಗಿದ್ದು, ಅವರ ಮೂಲ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ದಾಖಲಾತಿಯನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ.ಆದರೆ ಪರಶೀಲನೆಯ ಹಂತದಲ್ಲಿರುವ ಇಷ್ಟು ಶಿಕ್ಷಕರು ಯಾವಾಗ ಕರ್ತವ್ಯಕ್ಕೆ ಹಾಜರಾಗ ಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯ ಉತ್ತರವಿಲ್ಲ. ಈ ಬಗ್ಗೆ ಸರಕಾರ ಇನ್ನಷ್ಟೇ ತೀರ್ಮಾನ ಮಾಡ ಬೇಕಿದೆ. ಇದಕ್ಕೆ ಇನ್ನೆಷ್ಟು ಸಮಯ ಬೇಕಾಗ ಬಹುದು ಎಂಬುದು ಸದ್ಯದ ಪ್ರಶ್ನೆ.

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next