Advertisement

ರೈತರಿಗಾಗಿ ಸಹಕಾರಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು

12:24 PM May 28, 2017 | |

ಮೈಸೂರು: ಸಹಕಾರಿ ಸಂಘಗಳ ಅಭಿವೃದ್ಧಿಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಈ ಹಿನ್ನೆಲೆ ಹೆಚ್ಚಿನ ಸಹಕಾರಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಅಧ್ಯಕ್ಷ ಎಸ್‌. ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

Advertisement

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಗರದ ಚಾಮರಾಜ ಜೋಡಿರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಯೂನಿಯನ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಪರಿಶಿಷ್ಟ ಜಾತಿ/ಪಂಗಡಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದು, ಸಹಕಾರ ಸಂಘಗಳು ಬೆಳೆದಂತೆ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅಲ್ಲದೆ ಸಹಕಾರ ಸಂಸ್ಥೆಗಳ ಆರ್ಥಿಕ ವಹಿವಾಟಿನಿಂದ ಮಾರುಕಟ್ಟೆ ನಿಯಂತ್ರಿಸಬಹುದಾಗಿದ್ದು, ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿಗೂ ಸಹಕಾರಿ ಸಂಘ-ಸಂಸ್ಥೆಗಳು ಸಹಾಯ ಮಾಡುತ್ತವೆ. ರಾಜಕೀಯ ಕ್ಷೇತ್ರದಿಂದ ಸಿಗದಿರುವುದು ಸಹ ಸಹಕಾರಿ ಕ್ಷೇತ್ರದಿಂದ ದೊರೆಯಲಿದೆ. ಈ ಹಿನ್ನೆಲೆ ಸಹಕಾರಿ ಸಂಘಗಳಿಗೆ ಸಿಗುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಮುಂದೆ ಬರಲು ಹೆಚ್ಚು ಶ್ರಮವಹಿಸಬೇಕು ಎಂದರು.

ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಪಿ.ಸತೀಶ್‌ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಸಹಕಾರಿ ಸಂಘಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದು, ಈ ಭಾಗದ ಜನರಲ್ಲಿ ಸಹಕಾರ ಸಂಘಗಳ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ಆದರೆ ಸಹಕಾರಿ ಕೇಂದ್ರದಲ್ಲಿ ಎತ್ತರಕ್ಕೆ ಬೆಳೆಯಲು ಇರುವ ಅವಕಾಶವನ್ನು ಸೂಕ್ತ ರೀತಿಯಲ್ಲಿ ಕಲ್ಪಿಸಿಕೊಂಡಲ್ಲಿ, ಜೀವನ ನಿರ್ವಹಣೆಗೆ ಉತ್ತಮ ಅಡಿಪಾಯವಾಗಲಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್‌.ವಿ.ರಾಜೀವ್‌, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಶ್ರೀನಿವಾಸ್‌, ಎಂ.ಬಿ.ಮಂಜೇಗೌಡ, ಅಬ್ದುಲ್‌ ಮುಜೀಬ್‌, ಸಹಕಾರ ಸಂಘಗಳ ಉಪ ನಿಬಂಧಕ ಡಾ.ಜಿ.ಉಮೇಶ್‌, ಸಹಕಾರ ಶಿಕ್ಷಣಾಧಿಕಾರಿ ಡಿ.ಈರಯ್ಯ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next