Advertisement

ರಟ್ಟಾಗದ ಸಂಪುಟ ಗುಟ್ಟು; ತರಾತುರಿಯ ದಿಲ್ಲಿ ಪ್ರವಾಸದಿಂದ ಸಿಎಂ ಬಿಎಸ್‌ವೈ ವಾಪಸ್‌

11:19 PM Nov 18, 2020 | mahesh |

ಬೆಂಗಳೂರು: ಸಂಪುಟ ಸೇರಲು ತುದಿ ಗಾಲಿನಲ್ಲಿರುವ ಆಕಾಂಕ್ಷಿಗಳು ಇನ್ನೂ ಎರಡು- ಮೂರು ದಿನ ಕಾಯಲೇಬೇಕು!  ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮತಿ ಪಡೆಯುವ ಸಲುವಾಗಿ ಬುಧವಾರ ಬೆಳಗ್ಗೆ ದಿಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಂಜೆಯೇ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಅವರು, ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ವರಿಷ್ಠರಿಂದ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯೊಂದಿಗೆ ಮರಳಿದ್ದಾರೆ. ಹೀಗಾಗಿ ಸಂಪುಟ ಪರಿಷ್ಕರಣೆಯ ಚೆಂಡು ದಿಲ್ಲಿ ವರಿಷ್ಠರ ಅಂಗಳಕ್ಕೆ ಬಿದ್ದಂತಾಗಿದೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸೌಹಾರ್ದಯುತ ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆಗೆ ಅವಕಾಶ ಕೋರಿದ್ದೇನೆ. ಮುಂದಿನ 2 -3 ದಿನಗಳಲ್ಲಿ ಈ ವಿಚಾರ ಚರ್ಚಿಸಿ, ತಿಳಿಸುವುದಾಗಿ ಹೇಳಿದ್ದಾರೆ ಎಂದು ಯಡಿಯೂರಪ್ಪ ಅವರು ದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ. ರವಿ ಅವರು ರಾಜೀನಾಮೆ ನೀಡಿದ ಅನಂತರ 7 ಸಚಿವ ಸ್ಥಾನಗಳು ಖಾಲಿಯಿವೆ. ಅದರಲ್ಲಿ ಬಹುಮುಖ್ಯವಾದ ಖಾತೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಂಡು ಉಳಿದಂತೆ ವಿಧಾನ ಪರಿಷತ್‌ ಸದಸ್ಯರಾದ ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ ಮತ್ತು ನೂತನ ಶಾಸಕ ಮುನಿರತ್ನ ಅವರಿಗೆ ಖಾತೆ ಹಂಚುವ ಸಾಧ್ಯತೆಯಿದೆ. ಹಾಗೆಯೇ ಮೂಲ ಬಿಜೆಪಿಯಲ್ಲೂ ಒಬ್ಬರಿಗೆ ಅಥವಾ ಇಬ್ಬರಿಗೆ ಹೊಸದಾಗಿ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮೂಲ ಬಿಜೆಪಿಗರಲ್ಲಿ ಸುಳ್ಯ ಶಾಸಕ ಎಸ್‌. ಅಂಗಾರ, ಉಮೇಶ್‌ ಕತ್ತಿ, ಬಸನಗೌಡ ಪಾಟೀಲ್‌ ಯತ್ನಾಳ್‌, ರೇಣುಕಾಚಾರ್ಯ ಮೊದಲಾದವರು ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಆಕಾಂಕ್ಷಿಗಳಿಂದ ಸಿಎಂ ಭೇಟಿ
ಬುಧವಾರ ಬೆಳಗ್ಗೆ ಮುಖ್ಯಮಂತ್ರಿಯವರನ್ನು ಸಚಿವ ಸ್ಥಾನಾಕಾಂಕ್ಷಿ ಶಾಸಕರು ಭೇಟಿ ಮಾಡಿ ಸ್ವಲ್ಪ ಕಾಲ ಮಾತುಕತೆ ನಡೆಸಿದ್ದಾರೆ. ಸಂಪುಟ ಪುನಾರಚನೆಯಾದರೆ ಸ್ಥಾನ ಕೈತಪ್ಪಬಹುದು ಎಂಬ ಆತಂಕದಲ್ಲಿರುವ ಕೆಲವು ಸಚಿವರು ಕೂಡ ಇದೇ ವೇಳೆ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ಹಿರಿಯ ಶಾಸಕರಾದ ಉಮೇಶ್‌ ಕತ್ತಿ, ರೇಣುಕಾಚಾರ್ಯ, ಸಿದ್ದು ಸವದಿ ಮೊದಲಾದವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್‌, ಗಣಿ ಸಚಿವ ಸಿ.ಸಿ. ಪಾಟೀಲ್‌ ಕೂಡ ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

Advertisement

ಲಾಭ-ನಷ್ಟದ ಚರ್ಚೆ
ಮುಖ್ಯಮಂತ್ರಿಗಳ ದಿಲ್ಲಿ ಭೇಟಿ ವೇಳೆ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಬಗ್ಗೆ ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆಯಾದರೆ ಪಕ್ಷ ಸಂಘಟನೆ ಮೇಲಾಗುವ ಲಾಭ-ನಷ್ಟ, ಪುನಾರಚನೆಯಿಂದ ಪಕ್ಷ ಸಂಘಟನೆ ಮೇಲಾಗುವ ಲಾಭ-ನಷ್ಟದ ಬಗ್ಗೆ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪುನಾರಚನೆಯಾದರೆ ಯಾರನ್ನು ಕೈಬಿಡಬೇಕು ಮತ್ತು ಯಾರಿಗೆ ಸಚಿವ ಸ್ಥಾನ ನೀಡಬೇಕು, ಖಾತೆ ಬದಲಾವಣೆ ಇತ್ಯಾದಿಗಳ ಬಗ್ಗೆ ವರಿಷ್ಠರಿಗೆ ಸಿಎಂ ವಿವರ ನೀಡಿದ್ದಾರೆ. ಅಲ್ಲದೆ ವಿಸ್ತರಣೆಗೆ ಮಾತ್ರ ಅವಕಾಶ ನೀಡಿದರೆ, ಮುಖ್ಯವಾಗಿ ಸೇರಿಸಿಕೊಳ್ಳಬೇಕಾದ ನಾಲ್ಕೆ „ದು ಶಾಸಕರ ಹೆಸರುಗಳನ್ನು ಮುಖ್ಯಮಂತ್ರಿಯವರು ಉಲ್ಲೇಖೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next