Advertisement

2ಎ ಮೀಸಲು: ಅಧಿವೇಶನ ಬಳಿಕ ತಜ್ಞರ ಸಭೆ… ಸಿಎಂ ಸಿದ್ದರಾಮಯ್ಯ

08:10 PM Jun 23, 2023 | Team Udayavani |

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರವು ಕಾಟಾಚಾರಕ್ಕೆ ಮೀಸಲಾತಿ ನೀಡಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್‌ ಅಧಿವೇಶನದ ನಂತರ ಕಾನೂನು ತಜ್ಞರೊಂದಿಗೆ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಪಂಚಮಸಾಲಿ ಸಮುದಾಯವನ್ನು ರಾಜ್ಯ 2ಎ ಪಟ್ಟಿಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸುವ ಸಂಬಂಧ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಪಂಚಮಸಾಲಿ ಶಾಸಕರ ನಿಯೋಗದೊಂದಿಗೆ ನಡೆಸಿದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ಕಾಟಾಚಾರಕ್ಕಾಗಿ ಮೀಸಲಾತಿ ಕೊಡಬಾರದು. ಬಿಜೆಪಿಗೆ ಮೀಸಲಾತಿ ಕೊಡುವುದು ಬೇಕಾಗಿರಲಿಲ್ಲ. ಅದಕ್ಕಾಗಿಯೇ ನ್ಯಾಯಾಲಯಕ್ಕೆ ಹೋದರೆ, ಪ್ರಕರಣ ಬಿದ್ದು ಹೋಗುವ ರೀತಿಯಲ್ಲಿ ಮೀಸಲಾತಿ ನೀಡಿದರು. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಸಂವಿಧಾನ ತಜ್ಞರ ಜತೆ ಚರ್ಚಿಸಿ ಈ ಗೊಂದಲ ಬಗೆಹರಿಸಬೇಕಾಗಿದೆ. ಬಜೆಟ್‌ ಅಧಿವೇಶನದ ಬಳಿಕ ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವ ಬಗ್ಗೆ ಕಾನೂನು ತಜ್ಞರೊಂದಿಗೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೂಗಿಗೆ ತುಪ್ಪ ಸವರಿದ ಬಿಜೆಪಿ: ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದ ಮುಖ್ಯಮಂತ್ರಿಗಳು, ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದಲ್ಲಿ ಅವರೂ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

Advertisement

ಶಾಸಕ ವಿನಯ ಕುಲಕರ್ಣಿ ಮಾತನಾಡಿ, “ಮುಸ್ಲಿಂ ಸಮುದಾಯದ ಪಾಲಿನ ಮೀಸಲಾತಿಯನ್ನು ಕಿತ್ತು ನಮಗೆ ಕೊಟ್ಟಿದ್ದನ್ನು ನಾವು ಅವತ್ತೆ ವಿರೋಧಿಸಿದ್ದೆವು’ ಎಂದು ಗಮನಕ್ಕೆ ತಂದರು. ಸಭೆಯಲ್ಲಿ ಸಮುದಾಯದ 15 ಮಂದಿ ಶಾಸಕರು ಹಾಗೂ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

ನುಡಿದಂತೆ ನಡೆದವರು…
“ನುಡಿದಂತೆ ನಡೆದವರು ನೀವು’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಶಾಸಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸ್ವಾಮೀಜಿ ಮಾತನಾಡಿ, “ನುಡಿದಂತೆ ನಡೆದ ಮುಖ್ಯಮಂತ್ರಿಗಳು ನೀವು. ಬಸವಣ್ಣ ಅವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದವರು, ರಾಣಿ ಚನ್ನಮ್ಮ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಿದವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಉಳಿದ ಶಾಸಕರು ಸಹಮತ ವ್ಯಕ್ತಪಡಿಸಿದರು.

ಸಣ್ಣ ಉದ್ಯಮಿಗಳ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ
ಬೆಂಗಳೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂಧನ, ಕೈಗಾರಿಕೆ ಹಾಗೂ ಕಾಸಿಯಾ ಜತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಎನ್‌. ನರಸಿಂಹಮೂರ್ತಿ ನೇತೃತ್ವದ ನಿಯೋಗದ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಕೆಇಆರ್‌ಸಿ ವಿದ್ಯುತ್‌ ಬೆಲೆ ಹೆಚ್ಚಳ ಮಾಡಿದೆ. ರಾಜಕೀಯ ಉದ್ದೇಶಕ್ಕೆ ಬಿಜೆಪಿ ತನ್ನ ತಪ್ಪನ್ನು ನಮ್ಮ ಮೇಲೆ ಹೇರುತ್ತಿದೆ ಎನ್ನುವ ಸತ್ಯ ನಿಮಗೂ ಗೊತ್ತಿದೆ’ ಎಂದು ಮುಖ್ಯ ಮಂತ್ರಿ ಸ್ಪಷ್ಟಪಡಿಸಿದರು.

ವಿದ್ಯುತ್‌ ದರ ಏರಿಸಿದ ಕೆಇಆರ್‌ಸಿ ಶಿಫಾರಸು ಅನ್ನು ಮರುಪರಿಶೀಲಿಸುವಂತೆ ಮನವಿ ಮಾಡಲು ನಿಮಗೆ ಅವಕಾಶ ಇದೆ. ನೀವೊಮ್ಮೆ ನಿಮಗಾಗುತ್ತಿರುವ ಸಮಸ್ಯೆಗಳ ಕುರಿತು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್‌ಸಿ)ಕ್ಕೆ ಮನವಿ ಮಾಡಿಕೊಳ್ಳಬಹುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ನಿಯೋಗಕ್ಕೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next