Advertisement
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರಿ ನಿವಾಸ “ಕಾವೇರಿ’ಗೆ 3 ಕೋಟಿ ರೂ.ಗಳ ಪೀಠೊಪಕರಣ ಸರಬರಾಜು ಮಾಡಲು ಪಾರದರ್ಶಕ ಕಾಯ್ದೆಗೆ ವಿನಾಯಿತಿ ನೀಡಿದ್ದು, ಕಟ್ಟಡಕ್ಕೆ ಅಗತ್ಯವಿರುವ ಎಲ್ಲ ಪೀಠೊಪಕರಣ ಪೂರೈಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿ ಅಧಿಸೂಚನೆ ಹೊರಡಿಸಲಾಗಿದೆ.ಜತೆಗೆ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯಿಂದ 2 ವಾಹನ ಖರೀದಿಸಲು ಪಾರದರ್ಶಕ ಕಾಯ್ದೆಗೆ ವಿನಾಯಿತಿ ನೀಡಿದ್ದು, ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕರಿಗೆ 19.54 ಲಕ್ಷ ರೂ.ಗಳ ಇನ್ನೋವಾ ಹೈಕ್ರಾಸ್ ವಾಹನ ಹಾಗೂ ಸಿಎಂ ಮುಖ್ಯ ಸಲಹೆಗಾರ ಸುನೀಲ್ ಕುನುಗೋಳು ಅವರಿಗೆ 30 ಲಕ್ಷ ರೂ. ಮೌಲ್ಯದ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ವಾಹನ ಮಂಜೂರಾಗಿದೆ.
ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೊಟ್ಟಿದ್ದಂತೆ 2023-24ನೇ ಸಾಲಿನ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿ ನಿಲಯಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶುಚಿ ಸಂಭ್ರಮ ಕಿಟ್ ಹಾಗೂ ಸಿರಿಗಂಧ ಕಿಟ್‌ಗಳನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್)ನಿಂದ ಖರೀದಿಸಲು ಸಮಾಜ ಕಲ್ಯಾಣ ಇಲಾಖೆಗೆ ಅವಕಾಶ ನೀಡಿದ್ದು, 23.09 ಕೋ. ರೂ.ಗೆ ಮಂಜೂರಾತಿ ನೀಡಲಾಗಿದೆ. ಇದುವರೆಗೆ 75 ಗ್ರಾಂ ಕೊಡುತ್ತಿದ್ದ ಸಾಬೂನು ಇನ್ನು ಮುಂದೆ 125 ಗ್ರಾಂ ಕೊಡಬೇಕು ಹಾಗೂ ತಿಂಗಳಿಗೊಮ್ಮೆ ಟೂತ್‌ಬ್ರಷ್ ನೀಡುವ ಬದಲು 3 ತಿಂಗಳಿಗೊಮ್ಮೆ ಉತ್ತಮ ಗುಣಮಟ್ಟದ ಬ್ರಷ್ ನೀಡುವಂತೆ ಷರತ್ತು ವಿಧಿಸಲಾಗಿದೆ. ಗ್ಯಾರಂಟಿಗಳ ರೀಲ್ಸ್‌ಗೆ 94 ಲಕ್ಷ ರೂ.
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಲ್ಕು ಗ್ಯಾರಂಟಿ ಯೋಜನೆಗಳ ಕುರಿತು ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್ ಸಂಸ್ಥೆಗೆ 1 ಕೋಟಿ ರೂ. ಮಂಜೂರು ಮಾಡಿದ್ದ ಸರಕಾರ, ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ 2024ರ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದೊಳಗಾಗಿ ಸಮೀಕ್ಷಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸೂಚಿಸಿತ್ತು. ಈಗ ಗ್ಯಾರಂಟಿ ಯೋಜನೆಗಳು ಹಾಗೂ ಯೋಜನೆಗಳ ಲಾಭ ಪಡೆದುಕೊಂಡ ಫಲಾನುಭವಿಗಳ ಸಂದರ್ಶನ ಮಾಡಿದ ರೀಲ್ಸ್‌ಗಳನ್ನು ನಿರ್ಮಿಸಲು ಐಡಿಯಾ ಲ್ಯಾಬ್ ಎಂಬ ಸಂಸ್ಥೆಗೆ ಹೊಣೆ ಹೊರಿಸಿದ್ದು, 2024ರ ಮಾರ್ಚ್ ಅಂತ್ಯದವರೆಗೆ ಪ್ರತಿ ತಿಂಗಳೂ 20ರಿಂದ 60 ಸೆಕೆಂಡ್ ಅವಧಿಯ 60 ರೀಲ್ಸ್‌ಗಳಂತೆ ಒಟ್ಟು 300-400 ರೀಲ್ಸ್‌ಗಳನ್ನು ನಿರ್ಮಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಲು 94.40 ಲಕ್ಷ ರೂ.ಗಳಿಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.