ಕೋಲ್ಕತಾ:ಮುಂಬರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 294 ಕ್ಷೇತ್ರಗಳ ಪೈಕಿ 291 ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ(ಮಾರ್ಚ್ 05) ಘೋಷಿಸಿದ್ದು, ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ.
291 ಅಭ್ಯರ್ಥಿಗಳ ಪಟ್ಟಿಯಲ್ಲಿ ತೃಣಮೂಲ ಕಾಂಗ್ರೆಸ್ ಹಾಲಿ 25 ಶಾಸಕರು ಹಾಗೂ ಪಾರ್ಥ ಚಟ್ಟೋಪಾಧ್ಯಾಯ, ಅಮಿತ್ ಮಿತ್ರಾ ಸೇರಿದಂತೆ ಹಿರಿಯ ಸಚಿವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅಲ್ಲದೇ 80 ವರ್ಷಕ್ಕಿಂತ ಮೇಲ್ಪಟ್ಟವರನ್ನು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಟ್ಟಿದೆ ಎಂದು ವರದಿ ತಿಳಿಸಿದೆ.
294 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಮಾತ್ರ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 50 ಮಹಿಳಾ ಅಭ್ಯರ್ಥಿಗಳು, 42 ಮುಸ್ಲಿಂ ಅಭ್ಯರ್ಥಿಗಳು, 79 ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು 17 ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮಮತಾ ಘೋಷಿಸಿದ್ದಾರೆ.
ಎಂಟು ಹಂತಗಳಲ್ಲಿ ನಡೆಯಲಿರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗಾಗಿ ಮಮತಾ ಬ್ಯಾನರ್ಜಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ರಾಜ್ಯ ವಿತ್ತ ಸಚಿವ ಅಮಿತ್ ಮಿತ್ರಾ ಅವರ ಅನಾರೋಗ್ಯ ಕಾರಣದಿಂದ ಟಿಕೆಟ್ ನೀಡಿಲ್ಲ ಎಂದು ತಿಳಿಸಿರುವ ಮಮತಾ, ಈ ಬಾರಿಯ ಬಜೆಟ್ ನಲ್ಲಿಯೂ ಅಮಿತ್ ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಸ್ವಕ್ಷೇತ್ರವಾದ ಕೋಲ್ಕತಾದ ಭವಾನಿಪುರ್ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿರುವ ಮಮತಾ ಬ್ಯಾನರ್ಜಿ, ಈ ಕ್ಷೇತ್ರದಲ್ಲಿ ಟಿಎಂಸಿ ಹಿರಿಯ ಸಚಿವ ಸೋವನ್ ದೇವ್ ಚಟರ್ಜಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದರು.
80ವರ್ಷ ಮೇಲ್ಪಟ್ಟವರಿಗೆ ಈ ಬಾರಿ ಟಿಎಂಸಿ ಟಿಕೆಟ್ ನೀಡಿಲ್ಲ, ಈ ಹಿನ್ನಲೆಯಲ್ಲಿ ಸಚಿವ ಪಾರ್ಥ ಚಟ್ಟೋಪಾಧ್ಯಾಯ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಪಶ್ಚಿಮಬಂಗಾಳ ರಾಜಕಾರಣದಲ್ಲಿನ ಗೊಂದಲದ ನಡುವೆಯೇ ತೃಣಮೂಲ ಕಾಂಗ್ರೆಸ್ ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ 291 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.