Advertisement

ಮಾರಿಕಾಂಬಾ ಶಾಲೆಗೆ ನಾಡ ದೊರೆ ಮೆಚ್ಚುಗೆ 

06:00 AM Nov 02, 2018 | |

ಶಿರಸಿ: ಶತಮಾನೋತ್ತರ ಸುವರ್ಣ ಮಹೋತ್ಸವ ಕಂಡ ಉತ್ತರ ಕನ್ನಡದ ಶಿರಸಿ ಮಾರಿಕಾಂಬಾ ಪ್ರೌಢಶಾಲೆಗೆ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹೊತ್ತಲ್ಲೇ ಮತ್ತೂಂದು ಗರಿ ಮೂಡಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ “ರಾಜ್ಯದ ಅತಿ ದೊಡ್ಡ ಸರ್ಕಾರಿ ಪ್ರೌಢಶಾಲೆ’ ಎಂದು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಧನೆಯ ಬೆನ್ನೇರಿ ಹೊರಟಿರುವ ಮಾರಿಕಾಂಬಾ
ಸರ್ಕಾರಿ ಪ್ರೌಢ ಶಾಲೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ನಗರದ ಹೃದಯ ಭಾಗದಲ್ಲಿ ಸುಮಾರು 5 ಎಕರೆ 36 ಗುಂಟೆ ವಿಸ್ತೀರ್ಣದಲ್ಲಿರುವ ಶಾಲೆಯಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರೌಢಶಾಲೆಯಲ್ಲೇ ಈ ಬಾರಿ 1400 ವಿದ್ಯಾರ್ಥಿಗಳಿದ್ದಾರೆ. ಮಕ್ಕಳು ಶಿರಸಿ, ಹಾವೇರಿ,
ಹಾನಗಲ್‌, ಸಿದ್ದಾಪುರ, ಯಲ್ಲಾಪುರ ಗಳಿಂದಲೂ ಇಲ್ಲಿಗೆ ಬಂದು ಪ್ರೌಢ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ನಿತ್ಯ 1300ರಷ್ಟು ವಿದ್ಯಾರ್ಥಿಗಳು ಬಿಸಿಯೂಟ ಕೂಡ ಮಾಡುತ್ತಾರೆ. ಉಪ ಪ್ರಾಚಾರ್ಯ ನಾಗರಾಜ್‌ ನಾಯ್ಕ ನೇತೃತ್ವದ 30ಕ್ಕೂ ಅಧಿಕ ಶಿಕ್ಷಕರು ಪ್ರೌಢಶಾಲಾ ವಿಭಾಗ ನೋಡಿಕೊಳ್ಳುತ್ತಿದ್ದಾರೆ.

Advertisement

ದೊಡ್ಡವರ ಶಾಲೆ!: ಇಲ್ಲಿ ಓದುವ ಮಕ್ಕಳು ಮಾತ್ರ ಸಾಧನೆ ಮಾಡಿಲ್ಲ. ಇಲ್ಲಿ ಓದಿದ ಹಳೇ ವಿದ್ಯಾರ್ಥಿಗಳು ಕೂಡ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಾಮಾಂಕಿತ ರಾಗಿದ್ದಾರೆ. ನಾಡು ಕಂಡ ಶ್ರೇಷ್ಠ ರಾಜಕಾರಣಿ, ವಿಜ್ಞಾನಿ, ಚಿತ್ರನಟರೂ ಇಲ್ಲಿ ಓದಿದ್ದಾರೆ. ಕೇಂದ್ರದ ಮಾಜಿ ವಾಣಿಜ್ಯ ಸಚಿವ, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದೊಡ್ಮನೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ, ನಿವೃತ್ತ ರಾಜ್ಯ
ಚುನಾವಣಾ ಆಯುಕ್ತ ಎಂ.ಆರ್‌. ಹೆಗಡೆ, ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಗೋವಾದ ವೈಸ್‌ ಚಾನ್ಸಲರ್‌ ಡಾ.ಬಿ.ಎಸ್‌.ಸೋಂದೆ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಜಿ.ಎಸ್‌.ವೈದ್ಯ, ಅಮೆರಿಕದ ಪ್ರಸಿದ್ಧ ಉದ್ಯೋಗಿ ಕೆ.ವಿ.ಕಡೇಕೋಡಿ ಓದಿದ್ದು ಇದೇ
ಶಾಲೆಯಲ್ಲೇ ಎನ್ನುವುದು ಹೆಮ್ಮೆಯ ವಿಷಯ. 

ಇತಿಹಾಸವೂ ದೊಡ್ಡದಿದೆ: ಬ್ರಿಟಿಷ್‌ ಸರ್ಕಾರ 1865ರಲ್ಲಿ ಸ್ಥಾಪಿಸಿದ ಶಾಲೆಗೆ “ಆಂಗ್ಲೋ ವೆರ್ನಾಕುಲರ್‌’ ಎಂದು ಕರೆಯಲಾಗಿತ್ತು. 1884ರಲ್ಲಿ ಮಾರಿಕಾಂಬಾ ಶಾಲೆಯಾಗಿ ಪುನರ್‌ ನಾಮಕರಣವಾಯಿತು. 1926ರಲ್ಲಿ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿತು. 1984ರಲ್ಲಿ ಸರ್ಕಾರಿ ಪಿಯು ಕಾಲೇಜು ಕೂಡ ಸೇರ್ಪಡೆ ಆಯಿತು. ಶತಮಾನೋತ್ತರ ಸುವರ್ಣ ಮಹೋತ್ಸವ ಕಂಡ ಈ ಶಾಲೆಗೆ ಈಗ 153ನೇ ವರ್ಷ. ಮೂಲ ಸೌಲಭ್ಯಗಳೂ ಕೆಲವಷ್ಟು ಅಗತ್ಯವಿದೆ. ಅದರತ್ತ ಸಿಎಂ ಗಮನಹರಿಸಬೇಕಿದೆ.

ಸೌಲಭ್ಯವನ್ನೂ ಕಲ್ಪಿಸಲಿ
ಅನೇಕ ಕೊರತೆಗಳ ಮಧ್ಯೆ ಶಾಲೆ ಸಾಧನೆ ಮಾಡುತ್ತಿದೆ. ಗಂಡು ಮಕ್ಕಳಿಗೆ ಹೈಟೆಕ್‌ ಶೌಚಾಲಯವಿಲ್ಲ, ಸಾವಿರ ಮಕ್ಕಳು ಬಿಸಿಯೂಟ ಮಾಡಲು ಊಟದ ಹಾಲ್‌ ಇಲ್ಲ. ಕಟ್ಟಡಕ್ಕೆ ನೆಲ ಹಾಸಲು ಹೋಗಿದೆ, ಬಣ್ಣ ಮಾಸಿದೆ. ಸರ್ಕಾರ ನೀಡುವ ಸೈಕಲ್‌ ಏರುವ ಮಕ್ಕಳ ಸಂಖ್ಯೆಯೇ 800 ದಾಟುತ್ತದೆ. ಅದನ್ನು ನಿಲ್ಲಿಸಲು ಸೈಕಲ್‌ ಶೆಡ್‌ ಬೇಕು. ಹೈಟೆಕ್‌ ಲೈಬ್ರರಿ ಕೂಡ ಬೇಕು. ಇವೆಲ್ಲವುಗಳಿಗೆ ಕನಿಷ್ಠ 3 ಕೋಟಿ. ರೂ. ವಿಶೇಷ ಅನುದಾನ ಅಗತ್ಯವಿದೆ. 

ಮುಖ್ಯಮಂತ್ರಿಗಳು ನಮ್ಮ ಮಾರಿಕಾಂಬಾ ಪ್ರೌಢಶಾಲೆಯ ಕುರಿತು ಮಾತನಾಡಿದ್ದು  ಖುಷಿಯಾಗಿದೆ. ಇರುವ ಸಂಗತಿಯನ್ನು ನಾಡಿಗೆ ಹೇಳಿದ್ದಾರೆ.
● ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ

Advertisement

ಶಾಲೆಯಲ್ಲಿ ಶಿಕ್ಷಕರ ಪ್ರೋತ್ಸಾಹ, ತಿಳಿಸಿ ಹೇಳಿಕೊಡುವ ರೀತಿ ಆಪ್ತವಾಗುತ್ತದೆ. ನನಗಂತೂ ಮಾರಿಕಾಂಬಾ ಶಾಲೆ ಎಂದರೆ ಇಷ್ಟ.
● ಪ್ರಣವ್ ಪ್ರಣವ್ ಹಳೇಕಾನಗೋಡ,‌ 10ನೇ ತರಗತಿ

ರಾಘವೇಂದ್ರ ಬೆಟ್ಟಗೊಪ್ಪ 

Advertisement

Udayavani is now on Telegram. Click here to join our channel and stay updated with the latest news.

Next