Advertisement

ಜನಸೇವಕ ಯೋಜನೆಗೆ ಸಿಎಂ ಚಾಲನೆ

10:29 AM Nov 02, 2021 | Team Udayavani |

ಬೆಂಗಳೂರು: ಸರ್ಕಾರದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ “ಜನಸೇವಕ’ ಯೋಜನೆಯನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದು ಜನರ ಮನೆ ಬಾಗಿಲಿಗೆ ಹೋಗಿ ಸರ್ಕಾರದ ವಿವಿಧ ಸೇವೆಗಳನ್ನು ತಲುಪಿಸಿದರು. ಆಧಾರ್‌ ಕಾರ್ಡ್‌, ಹೆಲ್ತ್‌ಕಾರ್ಡ್‌, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ವಿವಿಧ 8 ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ “ಜನ ಸೇವಕ’ ಕಾರ್ಯಕ್ರಮಕ್ಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿ ಮುಖ್ಯಮಂತ್ರಿಯವರು ಸೋಮವಾರ ಚಾಲನೆ ನೀಡಿದರು.

Advertisement

ಈ ವೇಳೆ ಪ್ಯಾಲೇಸ್‌ ಗುಟ್ಟಹಳ್ಳಿಯ 4 ಮತ್ತು 5ನೇ ಅಡ್ಡರಸ್ತೆಗಳಲ್ಲಿರುವ ಆಯ್ದ 10 ಮನೆಗಳಿಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಜತೆ ತೆರಳಿದ ಮುಖ್ಯಮಂತ್ರಿ ಯವರು ವಿವಿಧ ಸೇವೆಗಳನ್ನು ಸಂಬಂಧಪಟ್ಟವರ ಮನೆಯೊಳಗೇ ಹೋಗಿ ತಲುಪಿಸಿದರು. ಖುದ್ದು ಮುಖ್ಯಮಂತ್ರಿಯವರೇ ತಮ್ಮ ಮನೆ ಬಾಗಿಲಿಗೆ ಬಂದಿದ್ದರಿಂದ ಸ್ಥಳೀಯರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಮುಖ್ಯಮಂತ್ರಿ ಮತ್ತು ಸಚಿವರಿಗೆ ಪುಷ್ಪವೃಷ್ಟಿ ಮಾಡಿ ಸಂಭ್ರಮಿಸಿದರು. ಪ್ರತಿ ಮನೆಯ ಒಳಗೆ ಹೋಗಿ, ಅವರಿಗೆ ಆಧಾರ್‌ ಕಾರ್ಡ್‌, ಹೆಲ್ತ್‌ ಕಾರ್ಡ್‌, ಎಪಿಎಲ್‌ ಕಾರ್ಡ್‌ ನೀಡಿದರು. ನಿರ್ಮಾಣ ಹಂತದ ಕಟ್ಟಡದೊಳಗೆ ಹೋಗಿ ಅಲ್ಲಿದ್ದ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್‌ ನೀಡಿದರು. ತಳ್ಳುವ ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಹಿಳೆಗೆ ಆರೋಗ್ಯ ಕಾರ್ಡ್‌ ನೀಡಿದರು. ಮುಖ್ಯಮಂತ್ರಿಯೇ ಬಂದು ಈ ರೀತಿ ಸೇವೆ ಒದಗಿಸಿದ್ದು ಸ್ಥಳೀಯರಲ್ಲಿ ಸಂತಸ ತಂದಿತ್ತು.

ಈ ಯೋಜನೆಯನ್ನು ಇಡೀ ಬೆಂಗಳೂರಿನಲ್ಲಿ ಜಾರಿ ಮಾಡುತ್ತಿದ್ದು, ಅದರ ಸಾಂಕೇತಿಕ ಉದ್ಘಾಟನೆ ಮÇÉೇಶ್ವರ ದಲ್ಲಿ ಆಗಿದೆ. 2022, ಜ.26ರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದರ ಜತೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಕಾಲ್‌ ಸೆಂಟರ್‌ ಕೂಡ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪಡಿತರ ಕೂಡ ನೇರವಾಗಿ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಬಸವರಾಜು, ಇಡಿಸಿಎಸ್‌ ನಿರ್ದೇಶಕಿ ದೀಪ್ತಿ ಕಾನಡೆ, ಜನಸೇವಕ ಯೋಜನೆಯ ನಿರ್ದೇಶಕ ವರಪ್ರಸಾದ್‌ ರೆಡ್ಡಿ ಇದ್ದರು.

ಮೊದಲ ದಿನದ ಫ‌ಲಾನುಭವಿಗಳು

Advertisement

ಮೊದಲ ದಿನದಂದೇ ಮಲ್ಲೇಶ್ವರದ ಧನಲಕ್ಷಿ¾ (ಮನೆ ಪ್ರಮಾಣ ಪತ್ರ), ಶ್ರವ್ಯಾ (ಜಾತಿ ಮತ್ತು ಆದಾಯ ಪ್ರಮಾಣ ಪತ್ರ), ನಾಗೇಶ್‌ (ಖಾತಾ), ನಾಗರತ್ನ ಮತ್ತು ಮುಕ್ತಾ (ವಿಧವಾ ವೇತನ), ರಮೇಶ್‌ (ಲೇಬರ್‌ ಕಾರ್ಡ್‌), ನಜೀರ್‌ (ಹಿರಿಯ ನಾಗರಿಕರ ಕಾರ್ಡ್‌), ಶಿವಶಂಕರ್‌ (ಆಧಾರ್‌ ), ಶ್ರೀನಿವಾಸಮೂರ್ತಿ (ಎಪಿಎಲ್‌ ಕಾರ್ಡ್‌), ಜಯರಾಂ ಮತ್ತು ವೆಂಕಟಲಕ್ಷ್ಮೀ(ಎಆರ್‌ಕೆಎಚ್‌) ಸೇವೆಗಳನ್ನು ಪಡೆದುಕೊಂಡರು. ಇವರಲ್ಲಿ ಬೀದಿ ಬದಿಯಲ್ಲಿ ಹೂ ಮಾರುವವರು, ಗುಡಿಸಲಿನಲ್ಲಿ ವಾಸವಿರುವವರು, ಕಟ್ಟಡ ಕಾರ್ಮಿಕರು, ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರು ಎಲ್ಲರೂ ಇದ್ದುದ್ದು ವಿಶೇಷ.

ಇದನ್ನೂ ಓದಿ:- ಬಿಜೆಪಿ ಕಾನೂನು ಪ್ರಕೋಷ್ಠದ ಸಭೆ

ಮನೆ ಬಾಗಿಲಿಗೆ ಜನಸೇವಕ

“ಜನಸೇವಕ’ ಯೋಜನೆಯಡಿ ಸದ್ಯಕ್ಕೆ ರಾಜ್ಯ ಸರ್ಕಾರದ 8 ಇಲಾಖೆಗಳ 58 ಸೇವೆಗಳು ಮನೆ ಬಾಗಿಲಿಗೇ ಬರಲಿವೆ. ಈ ಇಲಾಖೆಗಳಲ್ಲಿ ಕಂದಾಯ, ಆರೋಗ್ಯ, ಪೊಲೀಸ್‌, ವಸತಿ, ಶಿಕ್ಷಣ, ಜಲಮಂಡಲಿ, ಇಂಧನ, ಸಾರಿಗೆ, ಆಹಾರ ಇಲಾಖೆ ಸೇರಿವೆ. ಇದರ ವ್ಯಾಪ್ತಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಇಲಾಖೆ ಹಾಗೂ ಸೇವೆಗಳನ್ನು ಸೇರಿಸಲಾಗುವುದು. ವಿವರಗಳಿಗೆ  www.janasevakakarnataka.gov.in ನೋಡಬಹುದು.‌

ಅಥವಾ ಫೋನ್‌ ನಂ. 080- 44554455ನ್ನು ಸಂಪರ್ಕಿಸಬಹುದು. ಮಲ್ಲೇಶ್ವರಂ ಕ್ಷೇತ್ರದ ನಾಗರಿಕರು ಸಂಪರ್ಕಿಸಬಹುದಾದ ಸಂಖ್ಯೆ 080-23563943. “ಜನಸೇವಕ’ ಯೋಜನೆಯಡಿ ಸದ್ಯಕ್ಕೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್‌, ಆರ್ಧಾ ಕಾರ್ಡ್, ಆಯುಷ್ಮಾನ್‌ ಭಾರತ- ಆರೋಗ್ಯ, ಕರ್ನಾಟಕ ಐಡಿ ಕಾರ್ಡ್‌ (ಹೆಲ್ತ್ ಕಾರ್ಡ್‌), ಮತದಾ ರರ ಗುರುತಿನ ಚೀಟಿಗಳು ಕೋರಿಕೆಯ ಮೇರೆಗೆ ತ್ವರಿತ ಗತಿಯಲ್ಲಿ ಮನೆ ಬಾಗಿಲಿಗೇ ತಲುಪಲಿವೆ. ಈ ಕೆಲಸವನ್ನು ನಿರ್ದಿಷ್ಟ ವಿನ್ಯಾಸದ ಟೀ-ಶರ್ಟ್‌ ಧಾರಿಗಳಾಗಿ ಸ್ಕೂಟರಿನಲ್ಲಿ ಬರುವ ಜನಸೇವಕರ ಪಡೆ ಮಾಡಲಿದೆ.

ನಡೆದೇ ಹೋದ ಸಿಎಂ ಮುಖ್ಯಮಂತ್ರಿಯವರು ಖುದ್ದು ಜನಸೇವಕರಂತೆ ಸ್ಕೂಟರಿನಲ್ಲಿ ಹೋಗಿಯೇ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಭಾರೀ ಜನ ಸೇರಿದ್ದ ಕಾರಣ, ಅವರು ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕ್ಷಣದಲ್ಲಿ ಇಕ್ಕೆಲಗಳಲ್ಲೂ ಅಕ್ಕಪಕ್ಕದ ಮಹಡಿಯ ಮೇಲೆಲ್ಲ ನೆರೆದಿದ್ದ ಜನರು ಸಿಎಂ ಮತ್ತು ಸಚಿವರ ಮೇಲೆ ಪುಷ್ಪವೃಷ್ಟಿ ಮಾಡಿ ಹರ್ಷಿಸಿದರು.

ಬೊಮಾಯಿ ಕೈಗೆ ಮುತ್ತಿಟ್ಟ ಮಹಿಳೆ

ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿ ಖುದ್ದು ಮನೆ-ಮನೆಗೆ ತೆರಳಿ ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದ ವೇಳೆ ಮನೆಯೊಂದಕ್ಕೆ ಮುಖ್ಯಮಂತ್ರಿಯವರು ಹೋಗುತ್ತಿರುವಾಗ ಮಹಿಳೆಯೊಬ್ಬರು ಮುಖ್ಯಮಂತ್ರಿಯವರ ಬಲಗೈಗೆ ಮುತ್ತಿಟ್ಟ ಪ್ರಸಂಗ ನಡೆಯಿತು.

ಜನಸೇವಕ ಯೋಜನೆಗೆ ನನ್ನ ಮಲ್ಲೇಶ್ವರ ಕ್ಷೇತ್ರದ ಮೂಲಕ ಉದ್ಘಾಟಿಸಿದ್ದು ಸಂತಸ ತಂದಿದೆ. ಇವತ್ತಿನಿಂದಲೇ ಸರ್ಕಾರಿ ಸೇವೆ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುವುದು. ಈ ವಿಷಯದಲ್ಲಿ ಮಲ್ಲೇಶ್ವರ ಮುಂಚೂಣಿಯಲ್ಲಿ ಇರುತ್ತೆ ಎನ್ನುವ ವಿಶ್ವಾಸ ಇದೆ. ಡಾ.ಸಿ.ಎನ್‌.ಆಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next