ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿ ಪ್ರವಾಸ ಮುಗಿಸಿ ಬೆಂಗಳೂರು ವಿಮಾನ ಹತ್ತಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಿಎಂ ಬಿಎಸ್ ವೈ ಭೇಟಿಯಾಗಿದ್ದಾರೆ.
ಇದೀಗ ಮುಂದಿನ ಗುರುವಾರ (ಜು.22) ರಂದು ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದಾರೆ. ದೆಹಲಿ ಭೇಟಿಯ ಬಳಿಕ ನಡೆಯಲಿರುವ ಮೊದಲ ಸಚಿವ ಸಂಪುಟ ಸಭೆ ಇದಾಗಲಿದ್ದು, ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ದೆಹಲಿಯಲ್ಲೇ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬ ನಾಯಕರ ಭೇಟಿಯ ಬಳಿಕವೂ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ್ದೇನೆ ಎಂದಿದ್ದರು. ಅಮಿತ್ ಶಾ ಭೇಟಿಯ ಬಳಿಕ ಕರ್ನಾಟಕದಲ್ಲಿ ಒಳ್ಳೆ ಭವಿಷ್ಯ ಇದೆ. ನೀವೂ ಕೆಲಸ ಮಾಡಿ. ಸಂಪೂರ್ಣವಾಗಿ ಜೊತೆಗಿದ್ದೇವೆ ಎಂದು ಹೇಳಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಯಡಿಯೂರಪ್ಪ ಜೊತೆ ಆರು ದೊಡ್ಡ ದೊಡ್ಡ ಬ್ಯಾಗ್ ಗಳೂ ದೆಹಲಿಗೆ ಹೋಗಿದೆ!: ಎಚ್ ಡಿಕೆ ಹೊಸ ಬಾಂಬ್
ಒಟ್ಟಿನಲ್ಲಿ ಹಲವಾರು ಕುತೂಹಲಕ್ಕೆ ಕಾರಣವಾಗಿದ್ದ ಸಿಎಂ ಬಿಎಸ್ ವೈ ದೆಹಲಿ ಭೇಟಿ ಅಂತ್ಯವಾಗಿದೆ. ಎಲ್ಲಾ ನಾಯಕರೊಂದಿಗೆ ನಗುಮುಖದಿಂದಲೇ ಮಾತನಾಡಿ ಬಂದಿರುವ ಬಿಎಸ್ ವೈ, ಪಕ್ಷದೊಳಗಿನ ವಿರೋಧಿಗಳಿಗೆ ಹಲವು ಸಂದೇಶ ರವಾನಿಸಿದ್ದಾರೆ.