Advertisement

ಉಚ್ಚಿಲ ಕ್ಷೇತ್ರಕ್ಕೆ ಇಂದು ಸಿಎಂ ಬೊಮ್ಮಾಯಿ ; ವಿವಿಧ ಬೇಡಿಕೆ ಈಡೇರಿಕೆಗೆ ಮೊಗವೀರರ ಮನವಿ

12:54 AM Apr 11, 2022 | Team Udayavani |

ಕಾಪು: ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಖ್ಯಮಂತ್ರಿ ಎಸ್‌.ಆರ್‌. ಬಸವರಾಜ ಬೊಮ್ಮಾಯಿ ಎ. 11ರಂದು ಪೂರ್ವಾಹ್ನ 11 ಗಂಟೆಗೆ ಭೇಟಿ ನೀಡಲಿದ್ದಾರೆ.

Advertisement

ಈ ಸಂದರ್ಭ ನಡೆಯುವ ಧಾರ್ಮಿಕ ಸಭೆಯನ್ನು ಅವರು ಉದ್ಘಾಟಿಸುವರು. ಸಚಿವರಾದ ಎಸ್‌. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌ ಹಾಗೂ ಶಾಸಕರಾದ ಲಾಲಾಜಿ ಆರ್‌. ಮೆಂಡನ್‌, ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ವೇದವ್ಯಾಸ ಕಾಮತ್‌ ಸಹಿತ ವಿವಿಧ ಶಾಸಕರು, ಸಚಿವರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

ಸಿಎಂಗೆ ವಿವಿಧ ಬೇಡಿಕೆ
ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಥಮ ಬಾರಿಗೆ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯೂ ಸೇರಿದಂತೆ ಮೊಗವೀರ ಸಮಾಜದ ಜನರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರಾವಳಿಯ ಸಮಸ್ತ ಮೀನುಗಾರರ ಪರವಾಗಿ ಮುಖ್ಯಮಂತ್ರಿಗಳಿಗೆ ನೀಡಲಾಗುವುದು ಎಂದು ಸಮಾಜದ ಮುಖಂಡ ಡಾ| ಜಿ. ಶಂಕರ್‌ ಉದಯವಾಣಿಗೆ ತಿಳಿಸಿದ್ದಾರೆ.

5 ಕೋ.ರೂ.
ಅನುದಾನಕ್ಕೆ ಮನವಿ
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನವು 36 ಕೋ.ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಂಡು ಪುನಃಪ್ರತಿಷ್ಠೆ, ಬ್ರಹ್ಮಕಲಶ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು ಕ್ಷೇತ್ರದ ಮುಂದುವರಿದ ಕಾಮಗಾರಿಗೆ ಇನ್ನೂ 5 ಕೋಟಿ ರೂ. ಅಗತ್ಯ ಇದ್ದು ಮುಜರಾಯಿ ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗುತ್ತಿದೆ.

ವಿದ್ಯಾರ್ಥಿ ನಿಲಯ, ಮ್ಯೂಸಿಯಂ
ಮೊಗವೀರ ಸಮುದಾಯದ ಅತೀ ಹಿಂದುಳಿದ ವಿದ್ಯಾರ್ಥಿಗಳಿಗೆ ಮಹಾಲಕ್ಷ್ಮೀ ದೇವಸ್ಥಾನ ವ್ಯಾಪ್ತಿಯಲ್ಲಿ ಉಚಿತ ವಿದ್ಯಾರ್ಥಿ ನಿಲಯವನ್ನು ತೆರೆಯಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುಮತಿ ಸಹಿತವಾಗಿ ಇಲಾಖಾ ಮಂಜೂರಾತಿ ಮತ್ತು ಅನುದಾನ ದೊರಕಿಸಿ ಕೊಡುವುದು, ಉಚ್ಚಿಲದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕೇಂದ್ರ ಸ್ಥಾಪನೆ ಮತ್ತು ಹಳೆ ಮೀನುಗಾರಿಕೆ ಬೋಟ್‌ಗಳು ಕುಲಕಸುಬುಗಾರಿಕೆಯ ವಸ್ತುಗಳ ಪ್ರದರ್ಶನಕ್ಕೆ ಪೂರಕವಾಗುವಂತೆ ಮ್ಯೂಸಿಯಂ ನಿರ್ಮಾಣಕ್ಕೆ ಒತ್ತಾಯಿಸಲಾಗುವುದು.

Advertisement

ಶೂನ್ಯ ಬಡ್ಡಿ ಸಾಲ ನೀಡಿ
ಕರಾವಳಿಯ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಮಹಿಳಾ ಮೀನುಗಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ರಿಸರ್ವ್‌ ಬ್ಯಾಂಕ್‌ನಲ್ಲಿ ಅನುಮತಿ ಪಡೆದ ಪಟ್ಟಣ ಸಹಕಾರಿ ಬ್ಯಾಂಕಿನ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿಕೆ, ಮಹಿಳಾ ಮೀನುಗಾರರ ಬಾಕಿ ಇರುವ ಸಾಲ ಮನ್ನ ಮತ್ತು ಮೀನುಗಾರರ ಸಾಲದ ಬಡ್ಡಿ ಮನ್ನಾಕ್ಕೆ ಆಗ್ರಹ ಮತ್ತು ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಹೈಟೆಕ್‌ ಮೀನುಮಾರುಕಟ್ಟೆಯನ್ನು ಸ್ಥಾಪಿಸುವಂತೆ ಒತ್ತಾಯಿಸ ಲಾಗುವುದು.

ಡೀಸೆಲ್‌ ಸಬ್ಸಿಡಿ ಹೆಚ್ಚಿಸಿ
ಕರಾವಳಿಯಲ್ಲಿ ಮೀನುಗಾರಿಕೆ ಬೋಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದು ಸರಕಾರ ಮೀನುಗಾರರಿಗೆ ನೀಡುತ್ತಿರುವ ಕರ ರಹಿತ ಡೀಸೆಲ್‌ ಕೋಟಾವು ಡಿಸೆಂಬರ್‌ನಲ್ಲಿಯೇ ಮುಗಿಯುತ್ತಿದ್ದು ಇದನ್ನು 2 ಲಕ್ಷ ಕಿ.ಲೀ.ಗೆ ಏರಿಸುವುದು, ನಾಡದೋಣಿಗಳಿಗೆ ತಿಂಗಳಿಗೆ 400 ಲೀ.ನಂತೆ ಸಬ್ಸಿಡಿ ಸೀಮೆ ಎಣ್ಣೆ ನೀಡುವುದು. ಮೀನುಗಾರಿಕೆ ರಸ್ತೆ, ಬಂದರು ರಸ್ತೆಗಳ ಅಭಿವೃದ್ಧಿ ಪಡಿಸುವಂತೆಯೂ ಮನವಿ ಮಾಡಲಾಗುವುದು.

ಮೀನುಗಾರಿಕಾ ವಿ.ವಿ.
ಮೀನುಗಾರಿಕೆ ಕೈಗಾರಿಕೆ ವಲಯ ರಚನೆ, ಮಂಗಳೂರಿನಲ್ಲಿ ಮೀನುಗಾ ರಿಕಾ ವಿ.ವಿ. ರಚನೆಗೆ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next