ಶಿವಮೊಗ್ಗ: ಯಡಿಯೂರಪ್ಪ ಅವರು ಆರಂಭಿಸಿರುವ ಯೋಜನೆಗಳು ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ. ಬಂಗಾರಪ್ಪ ಅವರ ಸೇವೆ, ಸಾಮಾಜಿಕ ನ್ಯಾಯ ಮರೆಯಲು ಸಾಧ್ಯವಿಲ್ಲ. ಈ ಭಾಗದವರ ಹೋರಾಟದಿಂದ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಗೇಣಿದಾರರ ಹಕ್ಕಿಗಾಗಿ ಪಾದಯಾತ್ರೆ ಮಾಡಿದವರು ಯಡಿಯೂರಪ್ಪ ಅವರು. ರಾಜ್ಯದಲ್ಲಿ ಹಿಂದುಳಿದ ವರ್ಗದವರನ್ನು ಜಾಗೃತಿ ಮಾಡಿದ್ದು ಬಂಗಾರಪ್ಪನವರು. ಬಂಗಾರಪ್ಪ ಯಾವುದೇ ಒಂದು ಪಕ್ಷವನ್ನು ನಂಬಿ ರಾಜಕಾರಣ ಮಾಡಿದವರಲ್ಲ. ಹೀಗಾಗಿಯೇ ರಾಜ್ಯದ ಎಲ್ಲ ಭಾಗದಲ್ಲಿಯೂ ಬಂಗಾರಪ್ಪ ಅವರ ಅಭಿಮಾನಿಗಳು ಸಿಗುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಆನವಟ್ಟಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತಾನಾಡಿದ ಅವರು, ಹಿಂದುಳಿದ ವರ್ಗದವರ ಹೃದಯ ಸಾಮ್ರಾಟರು ಯಾರಾದರೂ ಇದ್ದರೆ ಅದು ದೇವರಾಜ ಅರಸ್ ಹಾಗೂ ಎಸ್.ಬಂಗಾರಪ್ಪ ಎಂದು ಬಂಗಾರಪ್ಪ ಅವರನ್ನು ಹಾಡಿ ಹೊಗಳಿದರು.
ಇದನ್ನೂ ಓದಿ: IPL 2023: ಆರ್ ಸಿಬಿಯಲ್ಲಿ ರಿಟೈನ್ – ರಿಲೀಸ್ ಆದ ಆಟಗಾರರು ಇವರೇ ನೋಡಿ
ಹಿಂದುಳಿದವರು ಇದೀಗ ಮತ್ತೆ ಜಾಗೃತರಾಗಿದ್ದಾರೆ. ತಮ್ಮ ಬೆಂಬಲಕ್ಕೆ ನಿಲ್ಲುವವರನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗಾಗಿ ಯಡಿಯೂರಪ್ಪ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪರವಾಗಿ ಶಿವಮೊಗ್ಗ ಜಿಲ್ಲೆಯ ಜನ ನಿಲ್ಲಬೇಕು. ಯಡಿಯೂರಪ್ಪ ಅವರಿಂದ ಕುಮಾರ್ ಬಂಗಾರಪ್ಪ ಅವರು ತಮ್ಮ ಕ್ಷೇತ್ರಕ್ಕೆ ಸಾಕಷ್ಟು ಯೋಜನೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದರು.
ಮೂಡಿ ಹಾಗೂ ಮೂಗೂರು ಏತನೀರಾವರಿ ಯೋಜನೆಗಳು ಜನವರಿಯಲ್ಲಿ ಉದ್ಘಾಟನೆಗೊಳ್ಳಲಿವೆ. ನಾನು ಹಾಗೂ ಯಡಿಯೂರಪ್ಪ ಅವರು ಬಂದು ಈ ಕಾರ್ಯಕ್ರಮ ಉದ್ಘಾಟಿಸಲಿದ್ದೇವೆ. ಈ ಎರಡು ಯೋಜನೆಗಳು ಪೂರ್ಣಗೊಂಡರೆ ಸೊರಬ ಕ್ಷೇತ್ರದ ಜನ ವರ್ಷಕ್ಕೆ ಎರಡು ಬೆಳೆ ಬೆಳೆಯಬಹುದು. ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿಯನ್ನೂ ಸೇರಿ ಏಳು ಕ್ಷೇತ್ರದಲ್ಲೂ ಗೆಲ್ಲಲಿದ್ದೇವೆ ಎಂದು ಘೋಷಿಸಿದರು.
ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಜಾತಿ ಧರ್ಮ ಧರ್ಮ ಒಡೆಯುವ ಕೆಲಸ ಮಾಡಿದ್ದರು. ಹಿಂದುಳಿದ ವರ್ಗವನ್ನು ಒಡೆದು ಹಿಂದುಳಿದ ವರ್ಗದ ನಾಯಕರು ಬೆಳೆಯದಂತೆ ಮಾಡಿದರು. ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಒಬ್ಬರಾದರೂ ಹಿಂದುಳಿದ ನಾಯಕರನ್ನು ಬೆಳೆಸಿದ್ದಾರೆಯೇ ಹೇಳಲಿ. ಸಿದ್ದು ಅಹಿಂದಾ ಅಹಿಂದ ಎಂದರು ಅವರು ಮಾತ್ರ ಮುಂದೆ ಹೋದರು ರಾಜ್ಯದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಎಂದರೆ ಅದು ಕಾಂಗ್ರೆಸ್ ಎಸ್ ಸಿ, ಎಸ್ ಎಸ್ ಟಿ ಮಕ್ಕಳಿಗೆ ನೀಡುವ ಹಾಸಿಗೆ ದಿಂಬಿನಲ್ಲಿಯೂ ಕಾಂಗ್ರೆಸ್ ದುಡ್ಡು ಮಾಡಿದೆ. ಅನ್ನಕ್ಕೆ ಕನ್ನ ಹಾಕಿದ್ದು ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಅನ್ನಭಾಗ್ಯದ ಅಕ್ಕಿ ನೀಡಿದ್ದು ನರೇಂದ್ರ ಮೋದಿ ಆದರೆ ಫೊಟೋ ಹಾಕೊಂಡು ವಿತರಣೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಇದೀಗ ವಯಸ್ಸಾಯಿತು ಮತ್ತೊಮ್ಮೆ ಅಧಿಕಾರ ಕೊಡಿ ಎನ್ನುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಸಿದ್ದರಾಮಯ್ಯಗೆ ಅಧಿಕಾರ ಕೊಡಬೇಕು. ಸಿದ್ದರಾಮಯ್ಯ ಅಂತಹ ಅವಿವೇಕಿಗಳು, ಕೀಳು ಮಟ್ಟದ ಮನಸ್ಥಿತಿಯವರು ಯಾರೂ ಇಲ್ಲ ಎಂದು ಕಿಡಿಕಾಡಿದರು.