ಹುಬ್ಬಳ್ಳಿ: ಎಂಇಎಸ್ ಪುಂಡಾಟಿಕೆ ಇದು ಹೊಸದೇನಲ್ಲ, ಅವರ ಒಟ್ಟು ಚಟುವಟಿಕೆಗಳೇ ಕಪ್ಪಾಗಿದ್ದು ಜನರ ಭಾವನೆಗಳನ್ನು ಕೆರಳಿಸುವ ಕಾರ್ಯವನ್ನು ಸದಾ ಅವರು ಮಾಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಇಎಸ್ ಕಳೆದ 20 ವರ್ಷಗಳಿಂದಲೇ ನೆಲೆ ಕಳೆದುಕೊಂಡಿದ್ದು, ಇಂತಹ ಕಿಡಗೇಡಿ ಕೃತ್ಯಗಳ ಮೂಲಕ ಜನರ ಬೆಂಬಲ ಗಳಿಸಬಹುದೆಂಬ ಯತ್ನಕ್ಕೆ ಮುಂದಾಗಿದೆ ಎಂದು ನುಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿಯ ಅಥವಾ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯು ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಮ್ಮ ಪ್ರಧಾನಿ ಹಿಂದಿನ ಪ್ರಧಾನಿಯಂತೆ ಸೂಟು- ಬೂಟು, ಎಸಿ ಕೋಣೆ ದೆಹಲಿ ವಾಸ್ತವ್ಯದ ಪ್ರಧಾನ ಮಂತ್ರಿಯಲ್ಲ ಹಳ್ಳಿ ಹಳ್ಳಿಗಳಿಗೂ ಹೋಗುತ್ತಿರುವ ಪ್ರಧಾನಿಯವರು ಜನರ ಭಾವನೆಗಳನ್ನು ಅರಿಯುವ ಕೆಲಸ ಮಾಡುತ್ತಿದ್ದು ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ ಎಂದರು.
ನಮ್ಮ ಪ್ರಣಾಳಿಕೆ ಕಂಡು ಬಿಜೆಪಿ ಅವರಿಗೆ ಹೆದರಿಕೆ ಆಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಇದೊಂದು ಹಾಸ್ಯಾಸ್ಪದ ವಿಷಯ ಎಂದರು.
ಬಜರಂಗದಳ ವಿಷಯವಾಗಿ ಪ್ರತಿಕ್ರಿಯಿಸಿದ ಸಿಎಂ ಕಾಂಗ್ರೆಸ್ ನವರು ಎಸ್ ಡಿಪಿಐ -ಪಿಎಫ್ಐ ಮೆಚ್ಚಿಸಲು ಏನೇನೋ ಯತ್ನಕ್ಕೆ ಮುಂದಾಗಿದ್ದಾರೆ ಅವರನ್ನು ಸಂತೋಷ ಪಡಿಸಲು ಹೋಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಸಿಎಂ ತಿಳಿಸಿದರು.