ಬೆಂಗಳೂರು: ಸಿಲಿಕಾನ್ ಸಿಟಿಯ ಪುರಾತನ ಚರ್ಚ್‌ಗಳಲ್ಲಿ ಒಂದಾದ ಶಿವಾಜಿನಗರದ ಸೇಂಟ್ ಮೇರೀಸ್ ಬೆಸಲಿಕಾ ಚರ್ಚ್‌ನಲ್ಲಿ ನಡೆಯುವ ಸಂತ ಮೇರಿ ಉತ್ಸವಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸವದಲ್ಲಿ ಪಾಲ್ಗೊಂಡು ಶುಭ ಕೋರಿದರು.
ಸಂತ ಮೇರಿ ಉತ್ಸವದ ಹಿನ್ನೆಲೆ ಬೆಸಲಿಕಾ ಚರ್ಚ್, ಶಿವಾಜಿನಗರ ಬಸ್ ನಿಲ್ದಾಣ, ಬ್ರಾಡ್‌ವೇ ರಸ್ತೆ ಸೇರಿದಂತೆ ಸುತ್ತಲಿನ ರಸ್ತೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. 10 ದಿನಗಳಿಂದ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ ಕ್ರೈಸ್ತ ಸಮುದಾಯವರು ಕೊನೆಯ ದಿನ ಸಂತ ಮೇರಿಯ ರಥ ಎಳೆಯುವ ಮೂಲಕ ಉತ್ಸವಕ್ಕೆ ತೆರೆ ಎಳೆದರು.
ಉತ್ಸವದ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಶಿವಾಜಿನಗರ ಸುತ್ತಲಿನ ಪ್ರದೇಶಗಳು, ಕಮರ್ಷಿಯಲ್ ಸ್ಟ್ರೀಟ್, ಇನ್‌ಫ್ಯಾಂಟ್ರಿ ರಸ್ತೆ, ಎಂ.ಜಿ. ರಸ್ತೆಯ ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಶಿವಾಜಿನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳ ಆಗಮನ ಮತ್ತು ನಿರ್ಗಮನ ಒಂದು ದಿನದ ಮಟ್ಟಿಗೆ ನಿಷೇಧಿಸಲಾಗಿತ್ತು. ಅಲ್ಲದೆ, ಸುತ್ತಮುತ್ತ ವಾಹನಗಳ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.
ಈ ಉತ್ಸವಕ್ಕೆ ಬೆಂಗಳೂರು ಸೇರಿದಂತೆ ತುಮಕೂರು, ದೊಡ್ಡಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳು ಮತ್ತು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಿಂದ ಸಾವಿರಾರು ಭಕ್ತರು ಆಗಮಿಸಿ ಮೇರಿ ಮಾತೆಯ ದರ್ಶನ ಪಡೆದರು. ಮಾಜಿ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೋ, ಹಿಂದಿನ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಸೇರಿದಂತೆ ಕ್ರೈಸ್ತ ಧರ್ಮಗುರುಗಳು ಉಪಸ್ಥಿತರಿದ್ದರು.
600ಕ್ಕೂ ಅಧಿಕ ಪೇದೆಯಿಂದ ಭದ್ರತೆ: ಶಿವಾಜಿನಗರದಲ್ಲಿ ನಡೆದ ಮೇರಿ ಮಾತೆ ಉತ್ಸವಕ್ಕೆ ಎರಡು ಲಕ್ಷಕ್ಕೂ ಹೆಚ್ಚಿನ ಜನರು ಸೇರಿದ್ದು, ಉತ್ಸವದ ಪ್ರಯುಕ್ತ ಶಿವಾಜಿನಗರ ಸುತ್ತಲಿನ ಪ್ರದೇಶದಲ್ಲಿ 600ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿದರು. ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, 28 ಇನ್ಸ್‌ಪೆಕ್ಟರ್, 550 ಸಂಚಾರಿ ಸಿಬ್ಬಂದಿ ಸೇರಿ ಒಟ್ಟು 600 ಕ್ಕೂ ಅಧಿಕ ಪೇದೆಗಳು ಭದ್ರತೆಗೆ ನೇಮಕವಾಗಿದ್ದರು.