ಕನ್ನಡ ಚಿತ್ರರಂಗದಲ್ಲಿ, ಅದರಲ್ಲೂ ಸ್ಟಾರ್ ಸಿನಿಮಾದಲ್ಲೇನಾದರೂ “ಹವಾ’ ಎಂಬ ಪದ ಬಂದರೆ ಅದೀಗ ಸಖತ್ ಸುದ್ದಿಯಾಗುತ್ತದೆ. ಅಭಿಮಾನಿಗಳು ಸಿಟ್ಟಾಗುತ್ತಾರೆ. “ನಮ್ ಗುರುಗೆ ಟಾಂಗ್ ಕೊಟ್ಟವ್ನೇ’ ಎಂದು ರಕ್ತಬಿಸಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಇತ್ತೀಚೆಗೆ ಬಂದ ಒಂದಷ್ಟು ಸ್ಟಾರ್ ಸಿನಿಮಾಗಳಲ್ಲಿ “ಹವಾ’ದ ಕುರಿತಾಗಿ ಡೈಲಾಗ್ ಇತ್ತು. ಎಲ್ಲಾ ಓಕೆ, ಈಗ ಯಾಕೆ “ಹವಾ’ಮಾನದ ಮಾತು ಎಂದು ನೀವು ಕೇಳಬಹುದು.
ಅದಕ್ಕೆ ಕಾರಣ “ನಾಗವಲ್ಲಿ’. ಮತ್ತೆ ನಾಗವಲ್ಲಿ ಕಾಟನಾ ಎಂದು ಕೇಳಿದರೆ ನಿಮಗೆ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಸಿನಿಮಾ ಬಗ್ಗೆ ಹೇಳಬೇಕು. “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂಬ ಚಿತ್ರವೊಂದು ತಯಾರಾಗಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದ ಪೋಸ್ಟರ್‌ನಲ್ಲಿ “ಇದುವರೆಗೂ ನಿಮ್ಮದೇ ಹವಾ … ಆದರೆ ಇನ್ಮುಂದೆ ನಾಗವಲ್ಲಿದೆ ಹವಾ …’ ಎಂಬ ಡೈಲಾಗ್ ಹಾಕಲಾಗಿದೆ.
ಈ ಡೈಲಾಗ್‌ನ ಅರ್ಥವೇನು, ನಿರ್ದೇಶಕರು ಯಾರಿಗಾದರೂ ಟಾಂಗ್ ಕೊಟ್ಟಿದ್ದಾರಾ ಎಂದು ನೀವು ಕೇಳಬಹುದು. ನಿರ್ದೇಶಕ ಶಂಕರ್ ಅರುಣ್ ಹೇಳುವಂತೆ, “ಇತ್ತೀಚೆಗೆ ಚಿತ್ರರಂಗದಲ್ಲಿ ಒಂದಷ್ಟು ಹವಾ ಕುರಿತಾಗಿ ಮಾತುಗಳು ಓಡಾಡುತ್ತಿತ್ತು. ಆದರೆ, ಮೊದಲು ಹವಾ ಸೃಷ್ಟಿಸಿದ್ದು ನಾಗವಲ್ಲಿ. ಈಗ ಮತ್ತೆ ನಾಗವಲ್ಲಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಹಾಗಾಗಿ, ಹಾಕಿದ್ದೇನಷ್ಟೇ, ಯಾರಿಗೂ ಟಾಂಗ್ ಅಲ್ಲ’ ಎನ್ನುತ್ತಾರೆ ಅರುಣ್.
ಅರುಣ್ ಈ ಹಿಂದೆ “ಸಪ್ನೊಂಕಿ ರಾಣಿ’ ಚಿತ್ರವನ್ನು ನಿರ್ಮಿಸಿದ್ದರು. ಈಗ ಸ್ವತಃ ಅವರೇ ನಿರ್ದೇಶನಕ್ಕೆ ಇಳಿದಿದ್ದಾರೆ. ನಾಗವಲ್ಲಿ ಕಾಟ ಇದೆಯಾ, ವಿಷ್ಣುವರ್ಧನ್, ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣನಾ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ತಿರುವನಂತಪುರಂನಲ್ಲಿರುವ ನಾಗವಲ್ಲಿ ಪ್ಯಾಲೇಸ್‌ನಲ್ಲಿ ಐದು ದಿನ ಚಿತ್ರೀಕರಣ ಮಾಡಿದ್ದು ಚಿತ್ರತಂಡದ “ಹೆಗ್ಗಳಿಕೆ’.