ನವದೆಹಲಿ: ದೇಶದ ಅಲ್ಲಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಜಾಗತಿಕ ತಾಪಮಾನ ಏರಿಕೆಯ ಫಲಶ್ರುತಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
“ಪಿಟಿಐ’ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, “ಸದ್ಯಕ್ಕೆ ದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗಳೆಲ್ಲವೂ ಮುಂಗಾರು ಮಾರುತಗಳ ಮಳೆಗಳಲ್ಲ. ಜಾಗತಿಕ ತಾಪಮಾನ ಬದಲಾವಣೆಯಿಂದ ಆಗುತ್ತಿರುವ ಮಳೆಗಳೂ ಸೇರಿವೆ. ಇವುಗಳ ಆರ್ಭಟದಿಂದಾಗಿ, ಸಣ್ಣ ಪ್ರಮಾಣದ, ಮುಂಗಾರು ಆಧಾರಿತ ಮಳೆಗಳು ಕ್ರಮೇಣ ನಾಪತ್ತೆಯಾಗುತ್ತಿವೆ” ಎಂದು ಹೇಳಿದ್ದಾರೆ.
ಇದಲ್ಲದೆ, “ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ಇಲಾಖೆಗಳ ಸಾಮರ್ಥ್ಯವನ್ನು ಕಂದುವಂತೆ ಮಾಡಿವೆ ಎಂದು ಹೇಳಿದ ಅವರು, ಈ ಸಮಸ್ಯೆಯಿಂದ ಹೊರಬರಲು ಐಎಂಡಿ ವತಿಯಿಂದ ಹವಾಮಾನ ಬದಲಾವಣೆಗಳನ್ನು ಮುಂಚಿತವಾಗಿಯೇ ನಿಖರವಾಗಿ ಅಳೆಯುವಂಥ ರೇಡಾರ್‌ಗಳನ್ನು ಹಾಗೂ ಕಂಪ್ಯೂಟಿಂಗ್ ಸಿಸ್ಟಂಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ.
“ರೇಡಾರ್, ಕಂಪ್ಯೂಟರ್ ಸಿಸ್ಟಂಗಳ ಜೊತೆಗೆ, ಆಟೋಮ್ಯಾಟಿಕ್ ವೆದರ್ ಸ್ಟೇಷನ್‌ಗಳು, ರೈನ್ ಗೇಜ್‌ಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಹವಾಮಾನ ಬದಲಾವಣೆಯನ್ನು ಮುಂಚಿತವಾಗಿಯೇ ಗ್ರಹಿಸಿ ಭೂಮಿಗೆ ಮಾಹಿತಿ ರವಾನಿಸಬಲ್ಲ ಅತ್ಯಾಧುನಿಕ ಉಪಗ್ರಹಗಳನ್ನು ಹಾರಿಬಿಡಲು ನಿರ್ಧರಿಸಲಾಗಿದೆ.
ಹಿಮಾಲಯ ಹಾಗೂ ಇನ್ನುಳಿತ ನಾಲ್ಕು ಕಡೆಗಳಲ್ಲೆ ಆರು ರೇಡಾರ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು, ಈ ಹೊಸ ರೇಡಾರ್‌ಗಳ ಖರೀದಿಗೆ ಚಿಂತನೆ ನಡೆಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.