ಹೊಸದಿಲ್ಲಿ: ಜನವರಿ ಅಂದರೆ ಅದು ದಟ್ಟ ಚಳಿಗಾಲದ ತಿಂಗಳು. ಆದರೆ, ಈ ವರ್ಷದ ಜನವರಿಯಲ್ಲಿ ದೇಶದ ವಾಯವ್ಯ ಭಾಗ ಹೊರತುಪಡಿಸಿ ಇಡೀ ಭಾರತ “ಅಸಾಮಾನ್ಯ ಬೆಚ್ಚಗಿನ ಉಷ್ಣಾಂಶ’ಕ್ಕೆ ಸಾಕ್ಷಿಯಾಗಿದೆ!
2016, 2009, 1958 ಮತ್ತು 1931ಕ್ಕೆ ಹೋಲಿಸಿದರೆ 2021ರ ಜನವರಿ ದಾಖಲೆಯ 5ನೇ ಅತೀ ಹೆಚ್ಚು ಬೆಚ್ಚಗಿನ ಉಷ್ಣಾಂಶ ಕಂಡಿದೆ. ಹವಾಮಾನ ವೈಪರಿತ್ಯದ ಬಿಸಿ ಇಡೀ ಭಾರತವನ್ನು ತಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
“ವಾಯುವ್ಯ’ಕ್ಕೆ ಎಂದಿನಂತೆ ಚಳಿ: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ವಾಯವ್ಯ ಭಾರತದಲ್ಲಿ ಗರಿಷ್ಠ ಸರಾಸರಿ 11.75 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.22 ಡಿ.ಸೆ. ಕಡಿಮೆ), ಗರಿಷ್ಠ 17.93 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.40 ಡಿ.ಸೆ. ಕಡಿಮೆ), ಕನಿಷ್ಠ 5.57 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.04 ಕಡಿಮೆ) ದಾಖಲಾಗಿದೆ.
ಮಿಕ್ಕೆಡೆ ಭಾರೀ ಏರುಪೇರು: ವಾಯವ್ಯ ಹೊರತಾದ ಭಾರತದಲ್ಲಿ ಜನವರಿಯ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ದಕ್ಷಿಣ ಭಾರತದಲ್ಲಿ ಗರಿಷ್ಠ ಸರಾಸರಿ 26.36 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 1.07 ಡಿ.ಸೆ. ಹೆಚ್ಚು), ಕೇಂದ್ರ ಭಾರತದಲ್ಲಿ ಗರಿಷ್ಠ ಸರಾಸರಿ 21.55 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.87 ಡಿ.ಸೆ. ಹೆಚ್ಚು), ಈಶಾನ್ಯ ಭಾರತದಲ್ಲಿ ಗರಿಷ್ಠ ಸರಾಸರಿ 17.19 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 0.69 ಡಿ.ಸೆ. ಹೆಚ್ಚು) ದಾಖಲಾಗಿದೆ.
ಈ ಮಧ್ಯೆ, ದಕ್ಷಿಣ ಭಾರತದಲ್ಲಿ ಜನವರಿಯ ಮೊದಲ 2 ವಾರಗಳು ಮೋಡ- ಮಳೆ ವಾತಾವರಣಕ್ಕೆ ಸಾಕ್ಷಿಯಾಗಿತ್ತು ಎಂದೂ ತಿಳಿಸಿದೆ.
ಸಿಡಿಲು ಅಧ್ಯಯನಕ್ಕೆ ಸಂಶೋಧನಾ ಕೇಂದ್ರ
ಸಿಡಿಲು ಸಹಿತ ಮಳೆ ಕುರಿತಾಗಿ ದೇಶದ ಮೊದಲ ಸಂಶೋಧನ ವೇದಿಕೆಯನ್ನು ಒಡಿಶಾದ ಬಾಲಸೋರ್ ನಗರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಐಎಂಡಿ ತಿಳಿಸಿದೆ. ಸಿಡಿಲಿನಿಂದಾಗಿ ಉಂಟಾಗುವ ಸಾವು-ನೋವು ಮತ್ತು ಆಸ್ತಿ ಹಾನಿ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಈ ವೇದಿಕೆ ಸ್ಥಾಪಿಸಲಾಗುತ್ತಿದೆ. ಐಎಂಡಿ ಇದನ್ನು ಡಿಆರ್ಡಿಒ, ಇಸ್ರೋ ಜತೆಗೂಡಿ ನಿರ್ಮಿಸುತ್ತಿದೆ. ಭೋಪಾಲ್‌ನಲ್ಲೂ ಇಂಥದ್ದೇ ಮಾನ್ಸೂನ್ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಐಎಂಡಿ ಪ್ರಧಾನ ನಿರ್ದೇಶಕ ಡಾ| ಮೃತ್ಯುಂಜಯ ಮೊಹಪಾತ್ರ ತಿಳಿಸಿದ್ದಾರೆ.