Advertisement

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

01:04 PM Dec 08, 2024 | Team Udayavani |

ಜಗತ್ತಿನಾದ್ಯಂತ ಅನೇಕ ಮಕ್ಕಳನ್ನು ಬಾಧಿಸುವ ಜನ್ಮಜಾತ ವೈಕಲ್ಯಗಳಲ್ಲಿ ಅತೀ ಸಾಮಾನ್ಯವಾದುದು ಸೀಳು ತುಟಿ ಮತ್ತು ಅಂಗುಳ (ಕ್ಲೆಫ್ಟ್ ಲಿಪ್‌ ಮತ್ತು ಪೆಲೇಟ್‌). ಸ್ತ್ರೀಯು ಗರ್ಭಿಣಿಯಾಗಿರುವ ಅವಧಿಯಲ್ಲಿ ಶಿಶುವಿನ ತುಟಿಗಳು ಮತ್ತು ಬಾಯಿಯ ಮೇಲ್ಭಾಗ (ಅಂಗುಳ) ಸಮರ್ಪಕವಾಗಿ ರೂಪುಗೊಳ್ಳದಿದ್ದರೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಮತ್ತು “ಸೀಳು’ ಉಂಟಾಗುತ್ತದೆ.

Advertisement

ಕೆಲವೊಮ್ಮೆ ಇತರ ಕಾಯಿಲೆಗಳು ಮತ್ತು ಸಿಂಡ್ರೋಮ್‌ಗಳು ಕೂಡ ಇದರ ಜತೆಗೆ ಇರಬಹುದು. ಸೀಳು ತುಟಿ ಮತ್ತು ಅಂಗುಳ ಹೊಂದಿ ಜನಿಸಿದ ಶಿಶು ಸೌಂದರ್ಯಾತ್ಮಕ ಕಾರಣ ಮತ್ತು ಶಿಶುವಿಗೆ ಮಾತಿನ ಬೆಳವಣಿಗೆ ಸರಿಯಾಗಿ ಆಗುವ ಕಾರಣಕ್ಕಾಗಿ ಕ್ಲಪ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ವೈಕಲ್ಯಗಳು ಚಿಂತೆಗೆ ಕಾರಣವಾದರೂ ಕೂಡ ಸೀಳು ತುಟಿ, ಅಂಗುಳಕ್ಕೆ ಕಾರಣಗಳು, ಸವಾಲುಗಳು ಮತ್ತು ಚಿಕಿತ್ಸೆಗಳ ಬಗ್ಗೆ ಕುಟುಂಬಗಳು ಕಲಿಯುವುದು ತಮ್ಮ ಪ್ರಯಾಣವನ್ನು ಹೆಚ್ಚು ವಿಶ್ವಾಸದಿಂದ ಮತ್ತು ಪರಿಣಾಮಕಾರಿಯಾಗಿ ನಡೆಸಲು ಸಹಾಯ ಮಾಡುತ್ತದೆ.

ಸೀಳು ತುಟಿ ಮತ್ತು ಅಂಗುಳ ಉಂಟಾಗಲು ಕಾರಣವೇನು?

ಸೀಳು ತುಟಿ ಮತ್ತು ಅಂಗುಳ ಉಂಟಾಗುವುದಕ್ಕೆ ನಿರ್ದಿಷ್ಟವಾದ ಕಾರಣ ಸ್ಪಷ್ಟವಾಗಿಲ್ಲ; ಆದರೆ ಪರಿಸರಕ್ಕೆ ಸಂಬಂಧಿಸಿದ ಮತ್ತು ವಂಶವಾಹಿ ಅಂಶಗಳಿಂದ ಇದು ತಲೆದೋರುತ್ತದೆ ಎಂಬುದಾಗಿ ಭಾವಿಸಲಾಗಿದೆ. ಕುಟುಂಬದಲ್ಲಿ ಸೀಳು ತುಟಿ – ಅಂಗುಳ ಹೊಂದಿರುವವರು ಈಗಾಗಲೇ ಇರುವುದು, ತಾಯಿಯು ಕೆಲವು ಔಷಧಗಳನ್ನು ಉಪಯೋಗಿಸಿರುವುದು, ಧೂಮಪಾನ ಅಥವಾ ಗರ್ಭಿಣಿ ಅವಧಿಯಲ್ಲಿ ಪೌಷ್ಟಿಕಾಂಶ ಕೊರತೆ ಇತ್ಯಾದಿ ಅಂಶಗಳು ಶಿಶು ಈ ವೈಕಲ್ಯಗಳೊಂದಿಗೆ ಜನಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದಾಗಿದೆ.

Advertisement

ಸೀಳು ತುಟಿ ಮತ್ತು ಅಂಗುಳ ಹೊಂದಿರುವ ಶಿಶುಗಳಿಗೆ ಆಹಾರ ಉಣಿಸುವ ಸವಾಲು

ಹೆತ್ತವರು ಎದುರಿಸುವ ಮೊದಲನೆಯ ಸವಾಲು ಎಂದರೆ ಸೀಳುತುಟಿ ಮತ್ತು ಅಂಗುಳ ಹೊಂದಿರುವ ಮಕ್ಕಳಿಗೆ ಆಹಾರ ಉಣಿಸುವುದು. ತುಟಿಗಳಲ್ಲಿ ಅಥವಾ ಅಂಗುಳದಲ್ಲಿ ಇರುವ ಸೀಳಿನಿಂದಾಗಿ ಎದೆ ಹಾಲು ಅಥವಾ ಬಾಟಲಿ ಹಾಲನ್ನು ಚೀಪಲು ಇಂತಹ ಶಿಶುಗಳಿಗೆ ಕಷ್ಟವಾಗುತ್ತದೆ. ಇದಕ್ಕೆ ಸಂಬಂಧಿಸಿದ ಚಿಕಿತ್ಸಕರು ಶಿಶು ಸರಿಯಾದ ಆಹಾರ ಸೇವನೆ ಮಾಡುವಂತೆ ಸಹಾಯ ಮಾಡುತ್ತಾರೆ; ಜತೆಗೆ ಇಂತಹ ಉದ್ದೇಶಕ್ಕಾಗಿಯೇ ಲಭ್ಯವಿರುವ ವಿಶೇಷ ಬಾಟಲಿ ಮತ್ತು ನಿಪ್ಪಲ್‌ಗ‌ಳು ಆಹಾರ ಸೇವನೆಯನ್ನು ಸುಲಭ ಮಾಡಿಕೊಡುತ್ತವೆ.

ಮಾತನಾಡುವ ಸಮಸ್ಯೆ

ಸೀಳು ತುಟಿ ಮತ್ತು ಅಂಗುಳ ಹೊಂದಿರುವ ಮಕ್ಕಳಲ್ಲಿ ಮಾತಿನ ಬೆಳವಣಿಗೆ ಕಷ್ಟವಾಗುತ್ತದೆ. ಗಾಳಿಯು ಬಾಯಿ ಮತ್ತು ಮೂಗಿನ ಮೂಲಕ ಒಳ ಪ್ರವೇಶಿಸುವ ಗಾಳಿಯ ಮೇಲೆ ತುಟಿ ಮತ್ತು ಅಂಗುಳದಲ್ಲಿ ಇರುವ ಸೀಳು ಪರಿಣಾಮ ಬೀರುವ ಮೂಲಕ ಮೂಗಿನಲ್ಲಿ ಮಾತನಾಡಿದಂತಹ ಅನುಭವಕ್ಕೆ ಕಾರಣವಾಗುತ್ತದೆ ಮತ್ತು ಕೆಲವು ವಿಧವಾದ ಸದ್ದುಗಳನ್ನು ಹೊರಡಿಸಲು ತೊಂದರೆ ಉಂಟು ಮಾಡಬಹುದು. ಇಂತಹ ಮಕ್ಕಳಲ್ಲಿ ಮಾತು ಅಸ್ಪಷ್ಟವಾಗಿರಬಹುದು ಅಥವಾ ಮಾತಿನ ಬೆಳವಣಿಗೆ ವಿಳಂಬವಾಗಬಹುದು.

ಶಸ್ತ್ರಚಿಕಿತ್ಸೆಗಳು ಮತ್ತು ಅವುಗಳ ಪ್ರಾಮುಖ್ಯ

ಸೀಳು ತುಟಿಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಬಾಲ್ಯಕಾಲದಲ್ಲಿಯೇ ನಡೆಸಲಾಗುತ್ತದೆ. ಸಮಸ್ಯೆ ಎಷ್ಟು ತೀವ್ರವಾಗಿದೆ ಎಂಬುದನ್ನು ಆಧರಿಸಿ ಇಂತಹ ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಶಸ್ತ್ರಚಿಕಿತ್ಸೆಗಳು ಬೇಕಾಗಬಹುದು. ಇಂತಹ ಶಸ್ತ್ರಚಿಕಿತ್ಸೆಗಳ ಗುರಿಗಳು ಮುಖದ ಸೌಂದರ್ಯವನ್ನು ವೃದ್ಧಿಸುವುದು, ಸೀಳನ್ನು ಮುಚ್ಚುವುದು ಹಾಗೂ ನುಂಗುವ ಮತ್ತು ಮಾತನಾಡುವ ಸಾಮರ್ಥ್ಯವನ್ನು ಪುನರ್‌ಸ್ಥಾಪಿಸುವುದಾಗಿರುತ್ತದೆ. ಶಸ್ತ್ರಚಿಕಿತ್ಸೆಯೊಂದರಿಂದಲೇ ಎಲ್ಲ ಸಮಸ್ಯೆಗಳನ್ನೂ ಅದರಲ್ಲೂ ಮಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ.

ಶಸ್ತ್ರಚಿಕಿತ್ಸೆಯ ಬಳಿಕ ಸ್ಪೀಚ್‌ ಥೆರಪಿ ಯಾಕೆ ಮುಖ್ಯ?

ಸೀಳು ತುಟಿ ಮತ್ತು ಅಂಗುಳಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಸರಿಪಡಿಸಿದ ಬಳಿಕವೂ ಅನೇಕ ಮಕ್ಕಳಿಗೆ ಸ್ಪೀಚ್‌ ಥೆರಪಿಯ ಅಗತ್ಯವಿರುತ್ತದೆ. ಸರಿಪಡಿಸಲಾದ ಅಂಗುಳದ ಸ್ನಾಯುವಿನ ನಿಯಂತ್ರಣ ಅಸಮರ್ಪಕವಾಗಿರುವುದರಿಂದ ಇಂತಹ ಮಕ್ಕಳಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವುದಕ್ಕಾಗಿ ಸದ್ದುಗಳನ್ನು ಸರಿಯಾಗಿ ಹೊರಡಿಸುವುದನ್ನು ಕಲಿಯಲು ಮತ್ತು ಸ್ಪಷ್ಟವಾದ ಮಾತನ್ನು ಆಡುವುದಕ್ಕಾಗಿ ಗಾಳಿಯ ಓಡಾಟದ ಸರಿಯಾದ ನಿರ್ವಹಣೆಗಾಗಿ ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟರಿಂದ ನಿರ್ದಿಷ್ಟ ಮಾತಿನ ಚಿಕಿತ್ಸೆಗಳ ಅಗತ್ಯವಿರುತ್ತದೆ.

ಮಾತಿನ ತೊಂದರೆ ಮತ್ತೂ ಉಳಿದಿರುವವರಿಗಾಗಿ

ಸೀಳು ತುಟಿ ಮತ್ತು ಅಂಗುಳ ಹೊಂದಿ ಜನಿಸಿರುವ ಬಹುತೇಕ ಶಿಶುಗಳು ಶಸ್ತ್ರಚಿಕಿತ್ಸೆ ಮತ್ತು ಥೆರಪಿಗಳ ಬಳಿಕ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾರೆ. ಆದರೆ ಕೆಲವು ಮಕ್ಕಳಿಗೆ ಮಾತ್ರ ಮಾತನಾಡುವ ಸಮಸ್ಯೆ ಮತ್ತೂ ಉಳಿದುಕೊಂಡಿರುವುದು ಸಾಧ್ಯ. ಇಂತಹ ಮಕ್ಕಳು ಅಂಗವಿಕಲರ ಹಕ್ಕುಗಳ ಕಾಯಿದೆಯ ಅನುಸಾರ ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ಅಜಿಭ ಸಲ್ಲಿಸಬಹುದಾಗಿದೆ. ಈ ಪ್ರಮಾಣಪತ್ರವು ಅವರಿಗೆ ಸೂಕ್ತ ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅರ್ಹ ವ್ಯಕ್ತಿಗಳು ಯುಡಿಐಡಿ (ಯುನೀಕ್‌ ಡಿಸೇಬಿಲಿಟಿ ಐಡೆಂಟಿಟಿ ಕಾರ್ಡ್‌) ಕೂಡ ಪಡೆಯಬಹುದಾಗಿದೆ. ದಕ್ಷಿಣ ಕನ್ನಡದಲ್ಲಿ ಇದನ್ನು ವೆನ್ಲಾಕ್‌ ಜಿಲ್ಲಾಸ್ಪತ್ರೆ ಹಾಗೂ ಉಡುಪಿಯಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಮೂಲಕ ಪಡೆಯಬಹುದಾಗಿದೆ.

ಸೀಳು ತುಟಿ ಮತ್ತು ಅಂಗುಳ ಸಮಸ್ಯೆ ಅನೇಕ ಸವಾಲು, ಸಂಕಷ್ಟಗಳನ್ನು ಉಂಟು ಮಾಡಬಹುದು; ಆದರೆ ಕ್ಲಪ್ತ ಕಾಲದಲ್ಲಿ ಚಿಕಿತ್ಸೆ, ವಿಶೇಷ ಆರೈಕೆ ಮತ್ತು ಸರಿಯಾದ ಬೆಂಬಲದ ಮೂಲಕ ಈ ಮಕ್ಕಳು ಕೂಡ ಎಲ್ಲರಂತೆಯೇ ಸಮೃದ್ಧ ಜೀವನವನ್ನು ನಡೆಸಬಹುದಾಗಿದೆ. ನೆನಪಿಡಬೇಕಾದುದು ಏನೆಂದರೆ, ಆದಷ್ಟು ಬೇಗನೆ ಚಿಕಿತ್ಸೆ ಒದಗಿಸುವುದು ತುಂಬಾ ಮುಖ್ಯ, ಜತೆಗೆ ಸರ್ಜನ್‌ ಗಳು, ಆಹಾರ ಸೇವನೆ ತರಬೇತುದಾರರು, ಸ್ಪೀಚ್‌ ಥೆರಪಿಸ್ಟ್‌ ಗಳು ಮತ್ತು ನೆರವು ಸಮುದಾಯಗಳನ್ನು ಒಳಗೊಂಡ ಬಹು ವಿಭಾಗೀಯ ಕಾರ್ಯವಿಧಾನದ ಮೂಲಕ ಇಂತಹ ಮಕ್ಕಳ ಜೀವನವನ್ನು ನಾವು ಬೆಳಗಿಸಬಹುದಾಗಿದೆ.

-ಡಾಸ್ಮಿನ್‌ ಎಫ್. ಡಿ’ಸೋಜಾ

ಕ್ಲಿನಿಕಲ್‌ ಸೂಪರ್‌ವೈಸರ್‌ ಗ್ರೇಡ್‌-1

ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌

ಪೆಥಾಲಜಿ ವಿಭಾಗ, ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next