Advertisement

ತೆರವು ಕಾರ್ಯಾಚರಣೆ; ವ್ಯಾಪಾರ ಮತ್ತೆ ಆರಂಭ

03:00 PM Jun 21, 2018 | |

ಬಂಟ್ವಾಳ: ಬಿ.ಸಿ. ರೋಡ್‌ ಫ್ಲೈ ಓವರ್‌ ಅಡಿಯಲ್ಲಿ ಕಳೆದ ಕೆಲವು ಸಮಯದಿಂದ ಅನಧಿಕೃತ ವ್ಯಾಪಾರ ನಡೆಸುತ್ತಿದ್ದ ತರಕಾರಿ ಅಂಗಡಿಗಳವರ ತೂಕದ ಯಂತ್ರ ಸಹಿತ ಇತರ ಸಾಮಗ್ರಿಗಳನ್ನು, ತರಕಾರಿಗಳನ್ನು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ ಕೆಲವೇ ಗಂಟೆಗಳ ಬಳಿಕ ಅದೇ ಸ್ಥಳದಲ್ಲಿ ರಸ್ತೆ ಬದಿ ತರಕಾರಿ ವ್ಯಾಪಾರ ಯಥಾ ಸ್ಥಿತಿ ಮುಂದುವರಿಯುವ ಮೂಲಕ ಆಡಳಿತದ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ.

Advertisement

ಬಿ. ಸಿ. ರೋಡ್‌ ಫ್ಲೈಓವರ್‌ ಅಡಿ ಭಾಗದಲ್ಲಿ ಆರಂಭವಾದ ಒಂದು ತರಕಾರಿ ಅಂಗಡಿ ಈಗ ರಾ.ಹೆ.ವರೆಗೂ ವಿಸ್ತರಿಸಿಕೊಂಡು ಏಳೆಂಟು ಮಂದಿ ವ್ಯಾಪಾರಿಗಳು ತರಕಾರಿ ಮಾರಾಟ ಆರಂಭಿಸಿದ್ದರು. ಪುರಸಭೆಗೆ ತೆರಿಗೆ ಪಾವತಿಸದೆ ನಗರದ ಮುಖ್ಯಭಾಗದಲ್ಲೇ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದರೂ ಪುರಸಭೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾಗಿ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.

ಹೊರ ಊರುಗಳಿಂದ ಬರುವ ವ್ಯಾಪಾರಿಗಳು ಬಿ.ಸಿ. ರೋಡ್‌ನ‌ ಮೇಲ್ಸೇತುವೆ ಅಡಿ ಭಾಗವನ್ನೇ ತಮ್ಮ ತರಕಾರಿ ವ್ಯಾಪಾರದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಆರಂಭದಲ್ಲಿ ಫ್ಲೈ ಓವರ್‌ನ ಒಂದು ಪಿಲ್ಲರ್‌ನಡಿ ತರಕಾರಿ ಮಾರಾಟ ಆರಂಭಿಸಿ ದಿನಕಳೆದಂತೆ ಒಂದೊಂದೆ ಅಂಗಡಿಗಳು ಹೆಚ್ಚುತ್ತಾ ಹೋಗಿವೆ. ಈಗ ಅದೊಂದು ತರಕಾರಿ ಮಾರುಕಟ್ಟೆಯೇ ಆಗಿ ಹೋಗಿದೆ.

ರಾ.ಹೆ.ವರೆಗೂ ಇಲ್ಲಿ ತರಕಾರಿಗಳನ್ನು ಜೋಡಿಸಿ ಇಡಲಾಗಿದೆ. ವಾಹನಗಳಲ್ಲಿ ಬರುವ ಜನರು ತಮ್ಮ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ ತರಕಾರಿ ಖರೀದಿಸುವುದರಿಂದ ವಾಹನ ಸಂಚಾರಕ್ಕೂ ಸಮಸ್ಯೆ ಎದುರಾಗುತ್ತಿತ್ತು. ಈ ಹಿಂದೆ ಮೇಲ್ಸೇತುವೆ ಅಡಿ ಭಾಗದಲ್ಲಿದ್ದ ಫಾಸ್ಟ್‌ಪುಡ್‌, ಚಪ್ಪಲಿ ಹೊಲಿಗೆ, ಕ್ಯಾಂಟೀನ್‌ಗಳನ್ನು ಪುರಸಭೆ ತೆರವುಗೊಳಿಸಿತ್ತು. 

ಪುರಸಭೆಗೆ ತೆರಿಗೆ ಕಟ್ಟಿ ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದರೂ ವಲಸಿಗರಿಂದ ರಸ್ತೆ ಬದಿಯಲ್ಲಿಯೇ ಅನಧಿಕೃತವಾಗಿ ವ್ಯಾಪಾರ ಮಾಡಲಾಗುತ್ತಿದೆ ಎಂಬ ಆರೋಪ ಇಲ್ಲಿನ ಖಾಯಂ ವ್ಯಾಪಾರಿಗಳದ್ದಾದರೆ, ನಾವು ಬಡವರು. ನಮ್ಮ ಹೊಟ್ಟೆಗೆ ಹೊಡಿಬೇಡಿ ಎನ್ನುವ ಅಳಲು ರಸ್ತೆ ಬದಿಯ ವ್ಯಾಪಾರಿಗಳದ್ದು. ಪ್ರತ್ಯೇಕ ತರಕಾರಿ ಮಾರುಕಟ್ಟೆ ಅಥವಾ ಸಂತೆ ಮಾರುಕಟ್ಟೆ ನಿರ್ಮಿಸಿದರೆ ಎಲ್ಲರಿಗೂ ಅನುಕೂಲ ಎಂಬ ಮಾತಿದೆ.

Advertisement

ಒಮ್ಮೆ ತೆರವು 
ರಸ್ತೆಯ ಬದಿಯಲ್ಲಿ ಕುಳಿತು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ವ್ಯಾಪಾರ ನಡೆಸುವ ಈ ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಈ ಹಿಂದೆ ಪೊಲೀಸರು ತೆರವುಗೊಳಿಸಿದ್ದರು. ಇಲ್ಲಿ ಬ್ಯಾರಿಕೇಡ್‌ ಇಟ್ಟು ತರಕಾರಿ ಮಾರಾಟ ಮಾಡದಂತೆ ಎಚ್ಚರಿಕೆ ಫಲಕವನ್ನು ಹಾಕಿದ್ದರು. ಆರಂಭದ ಒಂದು ವಾರ ತರಕಾರಿ ಮಾರಾಟಕ್ಕೆ ನಿಯಂತ್ರಣ ಬಿದ್ದಿದ್ದರೂ ಬಳಿಕ ಮತ್ತೆ ಅದೇ ಸ್ಥಿತಿ ಪುನರಾರಂಭಗೊಂಡಿದೆ.

ಸೂಕ್ತ ಕ್ರಮ
ಕಾನೂನು ಪ್ರಕಾರ ಕ್ರಮ ಕೈಗೊಂಡು ಅನಧಿಕೃತ ವ್ಯವಸ್ಥೆಯನ್ನು ತೆರವು ಮಾಡಿದೆ. ಆದರೆ ಪುನಃ ಪುನರಾವರ್ತನೆ ಆಗುತ್ತಿರುವುದರಿಂದ ಇದಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ಪುರಸಭೆಯ ಆಡಳಿತದ ಜತೆ ಚರ್ಚಿಸಿ
ಸೂಕ್ತ ಕ್ರಮ ಮಾಡಲಾಗುವುದು. 
-ರೇಖಾ ಜೆ. ಶೆಟ್ಟಿ
ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next