ಕಲಬುರಗಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛ ಭಾರತ ಅಭಿಯಾನದಡಿ ನೆಹರು ಯುವ ಕೇಂದ್ರದಿಂದ ಭಾರತೀಯ ಪುರಾತತ್ವ ಇಲಾಖೆ ಗುರುತಿಸಿರುವ ಸುಮಾರು 75 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಬುದ್ಧ ವಿಹಾರದಲ್ಲಿ ಬುಧವಾರ ನೆಹರು ಯುವ ಕೇಂದ್ರ ಕಲಬುರಗಿ ವಿಭಾಗ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶ ಸ್ವತಂತ್ರ್ಯಗೊಂಡು 75 ವರ್ಷಗಳು ಕಳೆದ ಸವಿನೆನಪಿಗಾಗಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಇದರ ನಿಮಿತ್ತ ಅ.1ರಿಂದ 31ರ ವರೆಗೆ ಜಿಲ್ಲೆಯ ವಿವಿಧೆಡೆ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದ್ದು, ಇದುವರೆಗೆ ಬಹುತೇಕ ಯಶಸ್ವಿಯಾಗಿದೆ ಎಂದರು.
ದೇಶದ 774 ಜಿಲ್ಲೆಗಳಲ್ಲಿಯೂ ಏಕಕಾಲಕ್ಕೆ ಸ್ವಚ್ಛತಾ ಅಭಿಯಾನ ಶುರುವಾಗಿದ್ದು, ಪ್ಲಾಸ್ಟಿಕ್ ಮುಕ್ತ ದೇಶಕ್ಕಾಗಿ ಶ್ರಮಿಸಬೇಕಿದೆ. ಸ್ವಚ್ಛತೆಯ ಈ ಅಭಿಯಾನ ಕೇವಲ ವಿದ್ಯಾರ್ಥಿಗಳಿಗೆ ಮೀಸಲಾಗಿರದೇ ಸಮುದಾಯದ ಮಟ್ಟದಲ್ಲಿನ ಬಹುದೊಡ್ಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವಾಗಬೇಕೆಂದು ಆಶಯ ವ್ಯಕ್ತಪಡಿಸಿದರು. ಭಾರತೀಯ ಪುರಾತತ್ವ ಇಲಾಖೆ ಗುರುತಿಸಿರುವ 75 ಸ್ಥಳಗಳಲ್ಲಿ ನಡೆಯುವ ಅಭಿಯಾನದಲ್ಲಿ ಧಾರ್ಮಿಕ, ಶೈಕ್ಷಣಿಕ, ಕ್ರೀಡಾ, ರೈಲ್ವೆ, ಪೊಲೀಸ್, ಮಾಧ್ಯಮ, ರಾಜಕೀಯ ನಾಯಕರು, ಅಧಿಕಾರಿಗಳು ಸೇರಿದಂತೆ ಎಲ್ಲ ರಂಗದ ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದರು.
ಇದೇ ವೇಳೆ ಕಲಬುರಗಿ ನೆಹರು ಯುವ ಕೇಂದ್ರದ ಅಧಿಕಾರಿ ಹರ್ಷಲ್ ತಾಳಸ್ಕರ್ ಮಾತನಾಡಿ, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 8,225 ಕೆಜಿ ಪ್ಲಾಸ್ಟಿಕ್ ಸ್ವಚ್ಛಗೊಳಿಸುವ ಗುರಿ ಹೊಂದಲಾಗಿದೆ. ಇಲ್ಲಿಯ ವರೆಗೆ ಶೇ. 91ರಷ್ಟು ಸ್ವಚ್ಛತೆ ಕಾರ್ಯ ಮುಕ್ತಾಯವಾಗಿದೆ. ನಗರ ಪ್ರದೇಶದಲ್ಲಿ ಪ್ರತಿದಿನ 275 ಕೆಜಿ ಪ್ಲಾಸ್ಟಿಕ್ ಸ್ವಚ್ಛಗೊಳಿಸುವ ಗುರಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು. ಬೀದರ್ ನೆಹರು ಯುವ ಕೇಂದ್ರದ ಅಧಿಕಾರಿ ಮಯೂರ್ ಕುಮಾರ, ಎನ್ ಎಸ್‌ಎಸ್ ಸಂಯೋಜಕ ಡಾ| ಚಂದ್ರಶೇಖರ ದೊಡ್ಡಮನಿ ಇದ್ದರು.