Advertisement

ಪಾಂಡೇಶ್ವರದ ನೆಹರೂ ವೃತ್ತದ ಸುತ್ತಮುತ್ತ ಸ್ವಚ್ಛತೆ 

11:43 AM Jan 22, 2018 | |

ಮಹಾನಗರ: ರಾಮಕೃಷ್ಣ ಮಿಷನ್‌ಸ್ವಚ್ಛತಾ ಅಭಿಯಾನದ 12ನೇ ವಾರದ ಸ್ವಚ್ಛತಾ ಕಾರ್ಯಕ್ರಮ ರವಿವಾರ ಪಾಂಡೇಶ್ವರದ ನೆಹರೂ ವೃತ್ತದ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು. ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದಜಿ ಹಾಗೂ ಕಾರ್ಪೊರೇಶನ್‌ ಬ್ಯಾಂಕ್‌ ಎಂ.ಡಿ. ಜಯಕುಮಾರ್‌ ಗರ್ಗ್‌ ಅವರು ಐಜಿಪಿ ಕಚೇರಿ ಮುಂಭಾಗ ಚಾಲನೆ ನೀಡಿದರು. ಸ್ವಾಮಿ ಧರ್ಮವ್ರತಾನಂದಜಿ, ಕಾರ್ಪೊರೇಶನ್‌ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್‌ ಮುರಳಿ ಭಗತ್‌ ಹಾಗೂ ಸ್ವದೇಶಿ ಸೇವಾ ತಂಡದ ಸದಸ್ಯರು ಉಪಸ್ಥಿತರಿದ್ದರು.

Advertisement

ಹತ್ತು ತಂಡಗಳಿಂದ ಶ್ರಮದಾನ
ಸ್ವಚ್ಛ ಮಂಗಳೂರು ಸ್ವಯಂ ಸೇವಕರು ಹಾಗೂ ಕಾರ್ಪೊರೇಶನ್‌ ಬ್ಯಾಂಕ್‌ ಮುಖ್ಯ ಕಚೇರಿಯ ಸುಮಾರು 300 ಸದಸ್ಯರು ಸುಮಾರು ಹತ್ತು ತಂಡಗಳನ್ನಾಗಿ ವಿಂಗಡಿಸಿಕೊಂಡು ಶ್ರಮದಾನ ಮಾಡಿದರು. ಕಾರ್ಪೊರೇಶನ್‌ ಬ್ಯಾಂಕಿನ ಮಹಾ ಪ್ರಬಂಧಕ ಗುರು ಹರಿನಾಥ್‌ ರಾವ್‌, ಎಸ್‌. ಕುಮಾರ್‌ ಹಾಗೂ ಎಂ.ಎನ್‌.ಕೆ. ವಿಶ್ವನಾಥ್‌ ನೇತೃತ್ವದಲ್ಲಿ ರೋಸಾರಿಯೋ ರಸ್ತೆ, ಪ್ರಧಾನ ಅಂಚೆ ಕಚೇರಿಯತ್ತ ಸಾಗುವ ಮಾರ್ಗ, ಎ ಬಿ ಶೆಟ್ಟಿ ವೃತ್ತ, ಪಾಂಡೇಶ್ವರ ಕಟ್ಟೆ ಕಡೆ ಸಾಗುವ ದಾರಿ ಹೀಗೆ ತಲಾ ಎರಡೆರಡು ಬದಿಗಳಲ್ಲಿ ಒಂದೊಂದು ತಂಡ ತೆರಳಿ ಸ್ವಚ್ಛತೆಯ ಕಾರ್ಯಕೈಗೊಂಡರು. ಹಲವರು ತೋಡುಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆಗೆದರೆ ಒಂದಿಷ್ಟು ಜನ ಕಾರ್ಯಕರ್ತರು ಮಾರ್ಗವಿಭಾಜಕಗಳನ್ನು ಸ್ವಚ್ಛಗೊಳಿಸಿದರು.

ವಿಶೇಷ ಕಾರ್ಯ
ಫಿಜಾ ಮಾಲ್‌ ಎದುರಿನ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೃಹತ್‌ ಮರದ ದಿಮ್ಮಿಯೊಂದು ಮಾರ್ಗದಲ್ಲಿ ಬಿದ್ದುಕೊಂಡು ರಸ್ತೆಯ ಉಪಯುಕ್ತ ಜಾಗೆಯನ್ನು ಆವರಿಸಿಕೊಂಡಿತ್ತು. ಇಂದು ಸ್ವಚ್ಛ ಮಂಗಳೂರಿನ ಕಾರ್ಯಕರ್ತರಾದ ಮೆಹಬೂಬ್‌, ದಿನೇಶ್‌ ಕರ್ಕೇರ ಮೊದಲಾದವರು ಜೇಸಿಬಿ ಸಹಾಯದಿಂದ ಅದನ್ನು ಎತ್ತಿ ಟಿಪ್ಪರಗೆ ಹಾಕಿ, ಸಾಗಿಸಿದರು. ಅನಂತರ ಆ ಜಾಗವನ್ನು ಶುಭ್ರಗೊಳಿಸಿದರು. ಮತ್ತೂಂದೆಡೆ ಸೌರಜ್‌ ಮಂಗಳೂರು, ಕಾವ್ಯಾ ಕೋಡಿಕಲ್‌ ಹಾಗೂ ಹಿಂದೂ ವಾರಿಯರ್ಸ್‌ ಸದಸ್ಯರು ಸರ್ವೀಸ್‌ ಬಸ್‌ ನಿಲ್ದಾಣದ ಬಳಿಯ ಆವರಣ ಗೋಡೆಗೆ ಅಂಟಿಸಿದ್ದ ಪೋಸ್ಟರ್‌ ಕಿತ್ತು ಹಾಕಿದರು. ಅನಂತರ ನೀರಿನ ಟ್ಯಾಂಕರ್‌ ತರಿಸಿಕೊಂಡು ದುರ್ವಾಸನೆಯಿಂದ ಕೂಡಿದ ಅಲ್ಲಿನ ಸ್ಥಳವನ್ನು ನೀರಿನಿಂದ ತೊಳೆದು, ಬಸ್‌ ಚಾಲಕ ನಿರ್ವಾಹಕರಿಗೆ ಸ್ವತ್ಛತೆಯ ಕುರಿತು ತಿಳಿಹೇಳಿ ಶೌಚಾಲಯವನ್ನೇ ಬಳಸುವಂತೆ ಮನವಿ ಮಾಡಿದರು.

ಕರಪತ್ರ ವಿತರಣೆ
ಶ್ರಮದಾನದ ಜೊತೆಗೆ ಪಾಂಡೇಶ್ವರ ಹಾಗೂ ಓಲ್ಡ್‌ ಕೆಂಟ್‌ ರಸ್ತೆಯ ನೂರಾರು ಮನೆಗಳಿಗೆ ತೆರಳಿ ಕರಪತ್ರ ಹಂಚಿ, ಪರಿಸರದ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಸತ್ಯನಾರಾಯಣ ಕೆ, ಕಾರ್ಪೊರೇಶನ್‌ ಬ್ಯಾಂಕಿನ ಸಿಬಂದಿ ಹಾಗೂ ಎಂ.ಎಸ್‌. ಕುಶೆ ಶಾಲಾ ವಿದ್ಯಾರ್ಥಿಗಳು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ ತಾ.ಪಂ. ಮುಂಭಾಗದಲ್ಲಿ ಸ್ವಚ್ಛತೆಯನ್ನು ಕೈಗೊಂಡು ಶುಚಿಗೊಳಿಸಿ ಆವರಣ ಗೋಡೆಯನ್ನು ಶುಚಿಗೊಳಿಸಲಾಗಿತ್ತು. ಈ ಬಾರಿ ಅದಕ್ಕೆ ಸುಣ್ಣ ಬಣ್ಣಗಳನ್ನು ಹಚ್ಚಿ ಚೆಂದಗೊಳಿಸಲಾಗಿದೆ.

ಕಾರ್ಪೊರೇಶನ್‌ ಬ್ಯಾಂಕಿನ್‌ ಡಿಜಿಎಂ ಎಸ್‌ ಸಾತು, ಎಜಿಎಂ ಎ.ಎನ್‌. ರವಿ ಶಂಕರ್‌ ಅಭಿಯಾನವನ್ನು ಸಂಯೋಜನೆ ಮಾಡಿದರು. ಡಾ| ಸತೀಶ್‌ ರಾವ್‌, ಡಾ| ಶಶಿಕಿರಣ, ಬಾಲಕೃಷ್ಣ ಭಟ್‌ ಸೇರಿದಂತೆ ಹಲವು ಜಪಾನಿ ನಾಗರಿಕರು ಅಭಿಯಾನದಲ್ಲಿ ಭಾಗವಹಿಸಿರುವುದು ವಿಶೇಷ. ಕಾರ್ಪೊರೇಶನ್‌ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶ್ರಮದಾನದ ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಅಭಿಯಾನಗಳಿಗೆ ಎಂಆರ್‌ಪಿಎಲ್‌ ಪ್ರಾಯೋಜಕತ್ವ ನೀಡುತ್ತಿದೆ.

Advertisement

ಸ್ವಚ್ಛ ಮನಸ್ಸು
ಮಂಗಳೂರು ನಗರ ಕೇಂದ್ರಿತ ಸುಮಾರು 108 ಪ್ರೌಢಶಾಲೆಗಳ ಸುಮಾರು 11 ಸಾವಿರ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಜಾಗೃತಿ ಮೂಡಿಸುವ ಸಲುವಾಗಿ ಕಳೆದ ಸುಮಾರು ಮೂರು ತಿಂಗಳಿಂದ ಸ್ವಚ್ಛ  ಮನಸ್ಸು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಈ ತಿಂಗಳಲ್ಲಿ ‘ಸ್ವಚ್ಛತಾ ದಿವಸ್‌’ ಎಂಬ ಶೀರ್ಷಿಕೆಯೊಂದಿಗೆ ಸುಮಾರು 7,800 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸುಮಾರು 60 ಜನ ಸಂಪನ್ಮೂಲ ವ್ಯಕ್ತಿಗಳು ಆಯಾ ಶಾಲೆಗಳಿಗೆ ತೆರಳಿ ಪ್ರತಿನಿತ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಸ್ವಚ್ಛಗ್ರಾಮ
ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ವಚ್ಛ ಗ್ರಾಮ ಅಭಿಯಾನ ಇಂದು ಸುಮಾರು ಮೂವತ್ತು ಗ್ರಾಮಗಳಲ್ಲಿ ಜರಗಿದೆ. ಇಲ್ಲಿಯ ತನಕ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ 170 ಕಾರ್ಯಕ್ರಮಗಳು ನಡೆದಿವೆ. ದ.ಕ. ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ಈ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next