ಗುರುಮಠಕಲ್: ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ಕಾಲಿಟ್ಟರೆ ತ್ಯಾಜ್ಯ ತುಂಬಿದ ಚರಂಡಿ, ಕಸ, ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗಳು ಕಣ್ಮುಂದೆ ಬರುತ್ತವೆ. ಇದರೊಂದಿಗೆ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯ ಇಲ್ಲದಂತಾಗಿದೆ.
ಪುಟಪಾಕ್ ಗ್ರಾಮ ಗ್ರಾಪಂ ಕೇಂದ್ರ ಸ್ಥಳವಾಗಿದ್ದು, 2500ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿದೆ. ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಅಂದಾಜು 7.50 ಲಕ್ಷ ರೂ. ಅನುದಾನದ ಅಡಿಯಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ.
ಎರಡು ವರ್ಷಗಳಿಂದ ಮುಳ್ಳುಕಂಟಿಯಲ್ಲಿ ಮರೆಯಾಗಿರುವ ಶೌಚಾಲಯ ಬಳಕೆಗೆ ಇಲ್ಲಿಯವರೆಗೂ ಅನುಕೂಲ ಮಾಡಿಲ್ಲ. ಅವುಗಳ ಸಮರ್ಪಕ ಬಳಕೆ ಇಲ್ಲದೇ ಇರುವುದರಿಂದ ಕಲ್ಲು, ಮುಳ್ಳು, ಗಾಜಿನ ಬಾಟಲಿಗಳು ಬಿದ್ದಿವೆ. ಪುರುಷರ ಶೌಚಾಲಯವೂ ಇದ್ದು, ನಿರ್ವಹಣೆ ಇಲ್ಲದೇ ಸುತ್ತಲೂ ಮುಳ್ಳು, ಕಂಟಿಗಳು ಬೆಳೆದು ಪಾಳು ಬಿದ್ದಿದೆ. ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ.
ಸ್ವಚ್ಛತೆ ಇಲ್ಲದ ಕಾರಣ ರಾತ್ರಿ ವೇಳೆ ಹಾವು-ಚೇಳಿನ ಭಯ ಕಾಡುತ್ತಿದೆ. ಸುತ್ತಲೂ ಸ್ವತ್ಛತಾ ಕಾರ್ಯಕೈಗೊಂಡರೆ ಬಯಲು ಬಹಿರ್ದೆಸೆ ಸಮಸ್ಯೆ ನಿವಾರಣೆಯಾಗುತಿತ್ತು. ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಅಲ್ಲಲ್ಲಿ ಬಯಲು ಶೌಚಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂ ಧಿಸಿದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಹಲವು ಸಲ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಮುಂದೆಯಾದರೂ ಇತ್ತ ಗಮನ ನೀಡಬೇಕು ಎಂದು ವೆಂಕಟೇಶ, ಅವಿನಾಶ, ಸುರೇಂದ್ರ ಗೌಡ, ಗುರು, ಅಬ್ದುಲ್ ಖಾದರ್, ಮೌಲಾನಾ, ನನ್ನೆಸಾಬ್, ಗೋಪಾಲರೆಡ್ಡಿ, ಮೊಹ್ಮದ್ ಖಾಜಾ ಸೇರಿದಂತೆ ಮಹಿಳೆಯರು ಆಗ್ರಹಿಸಿದರು.