ಮೈಸೂರು: ದೇಶದ ಸ್ವಚ್ಛತಾ ನಗರಿ ಸ್ಪರ್ಧೆಯಲ್ಲಿ ಈಗಾಗಲೇ ಎರಡು ಬಾರಿ ಅಗ್ರಸ್ಥಾನ ಪಡೆದು ಮತ್ತೂಮ್ಮೆ ಅಗ್ರಸ್ಥಾನ ಪಡೆಯಲು ಪ್ರಯತ್ನ ನಡೆಸುತ್ತಿರುವ ಮೈಸೂರಿಗೆ ಸೋಮವಾರ ಸ್ವಚ್ಛ ಸರ್ವೇಕ್ಷಣ್ ತಂಡ ಆಗಮಿಸಿ ಸಮೀಕ್ಷೆ ಆರಂಭಿಸಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನಡೆಸುತ್ತಿರುವ ಸಮೀಕ್ಷೆ ನಡೆಯಲು ಆಗಮಿಸಿರುವ ತಂಡ ನಗರದಲ್ಲಿ ಮೂರು ದಿನಗಳ ಪರಿಶೀಲನೆ ನಡೆಸಲಿದೆ. ರಾಜ್ಯ ಘಟಕದ ಮುಖ್ಯಸ್ಥ ಶ್ರೀನಿವಾಸನ್ ನೇತೃತ್ವದಲ್ಲಿ ವೀಕ್ಷಕರಾದ ಅಜಯ್, ಶ್ವೇತಾ, ಚೇತನ್ ಮತ್ತು ಪೂಜಾ ಅವರ ತಂಡ, ಸಮೀಕ್ಷೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಸಮೀಕ್ಷೆ ಹಿನ್ನೆಲೆಯಲ್ಲಿ ನಗರ ಪಾಲಿಕೆಗೆ ಭೇಟಿ ನೀಡಿದ ಸರ್ವೇಕ್ಷಣೆ ತಂಡದ ಅಧಿಕಾರಿಗಳು, ಸ್ವಚ್ಛತೆಗೆ ಸಂಬಂಧಿಸಿದಂತೆ ಪಾಲಿಕೆ ಸಂಗ್ರಹಿಸಿರುವ ಪ್ರಮುಖ ದಾಖಲಾತಿಗಳು, ಪೌರ ಕಾರ್ಮಿಕರ ಹಾಜರಾತಿಗೆ ಸಂಬಂಧಿಸಿದ ಬಯೋಮೆಟ್ರಿಕ್ ಇನ್ನಿತರ ಅಂಶಗಳ ಪರಿಶೀಲನೆ ನಡೆಸಿದರು.
ಜನಾಭಿಪ್ರಾಯ ಪ್ರಮುಖ: ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಪ್ರಮುಖವಾಗಿ ನಗರದಲ್ಲಿ ಕಸ ಸಂಗ್ರಹಣೆ, ತಾಜ್ಯ ವಿಲೇವಾರಿ ಸೇರಿದಂತೆ ಅನೇಕ ವಿಷಯಗಳನ್ನು ಪರಿಶೀಲನೆ ನಡೆಸಲಾಗುವುದು. ಇದಕ್ಕೂ ಮುಖ್ಯವಾಗಿ ಮೈಸೂರಿನ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಹ ಅಧಿಕಾರಿಗಳು ಸಂಗ್ರಹಿಸಲಿದ್ದು, ಈ ಸಂದರ್ಭದಲ್ಲಿ ಜನರು ನೀಡುವ ಅಭಿಪ್ರಾಯಗಳು ಸ್ವಚ್ಛತಾ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಈ ಬಾರಿಯ ಸ್ವಚ್ಛ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ದೇಶದ ಎಲ್ಲಾ ನಗರಗಳಲ್ಲಿ ಜ.4ರಿಂದ ಸಮೀಕ್ಷೆ ಆರಂಭಗೊಂಡಿದ್ದು, ಮಾರ್ಚ್ 10ರವರೆಗೆ ನಡೆಯಲಿದೆ. ಕಳೆದ ಬಾರಿ ಸ್ವಚ್ಛ ಸಮೀಕ್ಷೆಗೆ ನಿಗದಿಪಡಿಸಲಾಗಿದ್ದ, ಅಂಕವನ್ನು ಈ ಬಾರಿ 2000ಕ್ಕೆ ಬದಲಾಗಿ 4000 ಅಂಖಗಳಿಗೆ ನಿಗದಿಗೊಳಿಸಲಾಗಿದೆ.
ಮೂರು ದಿನ ಸಮೀಕ್ಷೆ: ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಗಾಗಿ 12 ಮಂದಿಯ ತಂಡ ನಗರಕ್ಕಾಗಮಿಸಿದ್ದಾರೆ. ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ ಸಮೀಕ್ಷೆಯಲ್ಲಿ ಸ್ಥಳ ಪರಿಶೀಲನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ಈ ಬಾರಿಯ ಸ್ವಚ್ಛತಾ ಸಮೀಕ್ಷೆಯಲ್ಲಿ ಪಾಲಿಕೆಯಿಂದ ಮಾಹಿತಿ ಸಂಗ್ರಹ ಮತ್ತು ಸಂವಹನಕ್ಕೆ 1400 ಅಂಕ ಹಾಗೂ ಸ್ಥಳ ಭೇಟಿಗೆ 1,200 ಅಂಕ ನಿಗದಿ ಪಡಿಸಲಾಗಿದೆ. ಸ್ವಚ್ಛತಾ ಬಳಕೆ ಆ್ಯಪ್ ಸೇರಿದಂತೆ ಸಾರ್ವಜನಿಕರ ಫೀಡ್ ಬ್ಯಾಕ್‌ಗೆ 1,400 ಅಂಕ ನಿಗದಿ ಪಡಿಸಿದ್ದು, ಆ್ಯಪ್ ಬಳಕೆಗೆ ನಿಗದಿಯಾಗಿರುವ 400 ಪೂರ್ಣ ಅಂಕವನ್ನು ಪಾಲಿಕೆ ಈಗಾಗಲೇ ಪಡೆದುಕೊಂಡಿದೆ ಎಂದು ಪಾಲಿಕೆ ಆಯುಕ್ತ ಜಿ. ಜಗದೀಶ್ ತಿಳಿಸಿದರು.