Advertisement

 ಹಸ್ತಾಂತರವಾಗದ ಸತ್ಯನಪಲ್ಕೆ ಸಮೀಪದ ನೀರಿನ ಘಟಕ; ವ್ಯರ್ಥವಾಗುತ್ತಿದೆ ಯಂತ್ರೋಪಕರಣ

07:18 PM Jan 19, 2022 | Team Udayavani |

ಬೆಳ್ತಂಗಡಿ: ಗ್ರಾಮ ಪಂಚಾ ಯತ್‌ ವ್ಯಾಪ್ತಿಯಲ್ಲಿ ಕಾಲನಿ ಸಹಿತ ಜನಸಾಮಾನ್ಯರು ಶುದ್ಧ ಕುಡಿಯುವ ನೀರು ಬಳಸಬೇಕೆಂಬ ಚಿಂತನೆಯಲ್ಲಿ ಕಳೆದ ನಾಲ್ಕಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಯಿಲ್ಲದೆ ಹತ್ತಾರು ಲಕ್ಷ ರೂ. ಬೆಳೆಬಾಳುವ ಯಂತ್ರೋಪಕರಣಗಳು ಪೋಲಾಗುತ್ತಿವೆ.

Advertisement

ಬೆಳ್ತಂಗಡಿ ತಾಲೂಕಿನಲ್ಲಿ ಜಿ.ಪಂ. ಅನುದಾನದಡಿ 2 ರೂ. ಕಾಯಿನ್‌ ಅಳವಡಿಸಿ 20 ಲೀಟರ್‌ ನೀರು ಪಡೆಯುವ ಶುದ್ಧ ಕುಡಿಯುವ ನೀರಿನ ಘಟಕವನ್ನು 18 ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಈ ಪೈಕಿ ಕಲ್ಮಂಜ ಗ್ರಾಮದ ಸತ್ಯನಪಲ್ಕೆ, ನಾರಾವಿ ಹಾಗೂ ಲಾೖಲ ಗ್ರಾ.ಪಂ.ನಲ್ಲಿ ಸ್ಥಾಪಿಸಿದ ಶುದ್ಧನೀರಿನ ಘಟಕ ಸುಸ್ಥಿತಿಯಲ್ಲಿಲ್ಲದೆ ವ್ಯರ್ಥವಾಗುತ್ತಿದೆ. ಕಲ್ಮಂಜ ಗ್ರಾಮದ ಮುಂಡಾಜೆಯಿಂದ ಧರ್ಮಸ್ಥಳ ಸಾಗುವ ಒಳರಸ್ತೆಯ ಸತ್ಯನಪಲ್ಕೆ ಎಂಬಲ್ಲಿ ನಿರ್ಮಾಣವಾಗಿದ್ದ ಘಟಕವಂತೂ ಗ್ರಾ.ಪಂ.ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿಲ್ಲ. ಸುತ್ತ ಗಿಡಗಂಟಿಗಳು ಆವರಿಸಿ ಬಾಗಿಲು ಬೀಗ ಒಡೆದು ಹಾಕಲಾಗಿದೆ.

ಸತ್ಯನಪಲ್ಕೆ ಸುತ್ತಮುತ್ತ 30ಕ್ಕೂ ಅಧಿಕ ಕುಟುಂಬಗಳಿವೆ. ಸುಮಾರು 100 ರಿಂದ 150ಕ್ಕೂ ಅಧಿಕ ಜನಸಂಖ್ಯೆ ಇದೆ. ಸಮೀಪದಲ್ಲೇ ಸತ್ಯನಪಲ್ಕೆ ಪ್ರಾ.ಶಾಲೆ ಯೊಂದಿದೆ. ಶಾಲೆ ಮಕ್ಕಳಿಗೂ ಬೇಸಗೆಯಲ್ಲಿ ಶುದ್ಧ ನೀರಿನ ಘಟಕ ಪ್ರಯೋಜನವಿದೆ. ಬೇಸಗೆ ಸಮೀಪಿ ಸುತ್ತಿರುವುದರಿಂದ ಇದರ ನಿರ್ವಹಣೆ ತುರ್ತಾಗಿ ಆಗಬೇಕಿತ್ತು. ಘಟಕಕ್ಕೆ ಬೋರ್‌ವೆಲ್‌ ಸಂಪರ್ಕ ಸಹಿತ ಎಲ್ಲ ವ್ಯವಸ್ಥೆ ಗಳಾಗಿವೆ. ಆದರೆ ನೀರು ಮಾತ್ರ ಬರುತ್ತಿಲ್ಲ. ಘಟಕವು ತುಕ್ಕು ಹಿಡಿದು ವ್ಯಥ್ಯವಾಗುವ ಹಂತದಲ್ಲಿದೆ. ಈ ಕುರಿತು ಸ್ಥಳೀಯರು ಸಂಬಂಧಪಟ್ಟ ಇಲಾಖೆ, ಜಿ.ಪಂ., ಶಾಸಕರು ಎಲ್ಲರಿಗೂ ಮನವಿ ನೀಡಿದ್ದಾರೆ. ಪ್ರತಿಕ್ರಿಯೆ ಮಾತ್ರ ಶೂನ್ಯ.

ತಾಲೂಕಿನಲ್ಲಿವೆ 18 ನೀರಿನ ಘಟಕ
ರಾಜ್ಯದಲ್ಲಿ ಅಂದಾಜು 18,582 ಶುದ್ಧ ನೀರಿನ ಘಟಕಗಳಿವೆ. ತಾಲೂಕಿನಲ್ಲಿ 18 ಶುದ್ಧ ಕುಡಿಯುವ ನೀರಿನ ಘಟಕವಿದೆ. ಅವುಗಳಲ್ಲಿ 13 ಜಿ.ಪಂ. ಹಾಗೂ ಗ್ರಾಮೀಣಾಭಿವೃದ್ಧಿ ಕುಡಿ ಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದಡಿ, 5 ಕೆಆರ್‌ಐಡಿಎಲ್‌ ನಿಂದ ಘಟಕ ಸ್ಥಾಪನೆಯಾಗಿದೆ. ಕನಿಷ್ಠ ಪಕ್ಷ ಒಂದು ಘಟಕ ಸ್ಥಾಪನೆಗೆ 8ರಿಂದ 10 ಲಕ್ಷ ರೂ. ವ್ಯಯಿಸಲಾಗುತ್ತದೆ. ಆದರೆ ಉಪಯೋಗ ವಾಗುತ್ತಿಲ್ಲ. ತಾಲೂಕಿನಲ್ಲಿ ಪ್ರಸಕ್ತ 13 ಘಟ ಕಗಳು ನಿರ್ವಹಣೆಯಲ್ಲಿದ್ದು, 3 ಘಟಕಗಳು(ನಾರಾವಿ, ಕಲ್ಮಂಜ, ಲಾೖಲ) ವ್ಯರ್ಥವಾಗುತ್ತಿದೆ. ನಿರ್ವ ಹಣೆಗೆ ಗುತ್ತಿಗೆ ಪಡೆದ ಏಜೆನ್ಸಿಗಳು ಕೈ ಕೊಡುತ್ತಿರುವುದರಿಂದ ಗ್ರಾ.ಪಂ.ಗೆ ಹಸ್ತಾಂತರಿಸಲು ತಾಂತ್ರಿಕ ಅಡಚಣೆ ಉಂಟಾಗಿದೆ ಎನ್ನಲಾಗಿದೆ.

ಎಲ್ಲರಿಗೂ ಅನುಕೂಲ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಯಂದು ಸಾವಿರಾರು ಮಂದಿ ಯಾತ್ರಾರ್ಥಿಗಳು ಪ್ರತೀ ವರ್ಷ ಆಗಮಿಸುತ್ತಾದರೆ. ಚಿಕ್ಕಗಳೂರು, ಕಡೂರು, ಕೊಟ್ಟಿಗೆಹಾರ ಸುತ್ತಮುತ್ತಲ ಮಂದಿ ಚಾರ್ಮಾಡಿ ರಸ್ತೆಯಾಗಿ ಆಗಮಿಸುತ್ತಾರೆ. ಹೀಗೆ ಬರುವಾಗ ಮುಂಡಾಜೆಯಿಂದ ಬರುವ ಮಂದಿ ಕಲ್ಮಂಜ ಸತ್ಯನಪಲ್ಕೆಯಾಗಿ ಮುಂಡ್ರಪ್ಪಾಡಿಯಾಗಿ ಸಾಗಲು ತೀರ ಹತ್ತಿರದ ಹಾದಿಯಾಗಿದೆ. ಸುಮಾರು 10 ಕಿ.ಮೀ. ಸುತ್ತಿಬಳಸಿ ಬರುವುದನ್ನು ತಪ್ಪುತ್ತದೆ. ಈ ಹಾದಿಯಾಗಿ ಸಾಗುವ ಯಾತ್ರಾರ್ಥಿಗಳಿಗೂ ಕುಡಿಯುವ ನೀರಿನ ಆವಶ್ಯಕತೆ ಬರುವುದರಿಂದ ನೀರಿನ ಘಟಕ ಚಾಲ್ತಿಯಲ್ಲಿರುವಂತೆ ಮಾಡುವ ಕೆಲಸ ಅಗತ್ಯ ಆಗಬೇಕಿದೆ.

Advertisement

ಕ್ರಮ ಕೈಗೊಳ್ಳಲಾಗುವುದು
ಗುತ್ತಿಗೆದಾರರ ತಾಂತ್ರಿಕ ಸಮಸ್ಯೆಯಿಂದ ಗ್ರಾ.ಪಂ.ಗೆ ಹಸ್ತಾಂತರಿಸುವಲ್ಲಿ ವಿಳಂಬವಾಗಿದೆ. ಈ ಕುರಿತು
ಪ್ರಯತ್ನಗಳು ನಡೆಯುತ್ತಿವೆ. ಶೀಘ್ರದಲ್ಲಿ ನಿರ್ವಹಣೆ ಜವಾಬ್ದಾರಿ ಗ್ರಾ.ಪಂ.ಗೆ ನೀಡಿ ಘಟಕ ಸುಸ್ಥಿಯಲ್ಲಿರುವಂತೆ ಕ್ರಮ ವಹಿಸಲಾಗುವುದು.
-ಸೂರ್ಯನಾರಾಯಣ ಭಟ್‌, ಎಇಇ, ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು, ನೈರ್ಮಲ್ಯ ಉಪವಿಭಾಗ, ಬೆಳ್ತಂಗಡಿ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next