ಮಹಾನಗರ: ದೇಶದಲ್ಲೇ ಕಳೆದ ವರ್ಷ ಅತ್ಯಂತ ಸ್ವತ್ಛ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಅತ್ಯಂತ “ಕ್ಲೀನ್ ಸಿಟಿ’ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಂಗಳೂರು ನಗರಕ್ಕೆ ಈ ಬಾರಿ ಮತ್ತದೇ ಪಟ್ಟ ಒಲಿದು ಬರಲಿದೆಯೇ?
ಸ್ವತ್ಛ ಭಾರತ ಅಭಿಯಾನ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾ ಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಈ ಅಭಿಯಾನದ ಹಿನ್ನೆಲೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಪ್ರತಿ ವರ್ಷ ಸ್ವತ್ಛತೆ ಹಾಗೂ ನೈರ್ಮಲ್ಯತೆಯಲ್ಲಿ ಸಾಧನೆ ಮಾಡಿರುವ ಪ್ರಮುಖ ನಗರಗಳನ್ನು ಗುರುತಿಸಿ ಬಿರುದು ನೀಡುತ್ತಿದೆ. ಸ್ವತ್ಛ ಸರ್ವೇಕ್ಷಣಾ ಹೆಸರಿನಲ್ಲಿ ನಡೆಯುವ ಅತ್ಯಂತ ಸ್ವತ್ಛ ನಗರಗಳ ಆಯ್ಕೆ ಪಟ್ಟಿಯ ಘೋಷಣೆಯು ಮೇ 4ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ.
ಮಂಗಳೂರು ನಗರಕ್ಕೂ ಸ್ವತ್ಛ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಲಭಿಸುವ ಸಾಧ್ಯತೆಗಳಿವೆ. ಮಹಾನಗರ ಪಾಲಿಕೆಯ ಮೂಲಗಳ ಪ್ರಕಾರ ಮಂಗಳೂರು ಕಳೆದ ಬಾರಿಯಂತೆ ಈ ಸಲವೂ ಮೊದಲ 10 ಕ್ಲೀನ್‌ಸಿಟಿ ಪಟ್ಟಿಯಲ್ಲಿ ಸ್ಥಾನ ಗಳಿಸುವ ಸಾಧ್ಯತೆ ಇದೆ. “ಸ್ವತ್ಛ ಭಾರತ ಅಭಿಯಾನದ ಸರ್ವೆ-2016ರಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರು ನಗರ 3ನೇ ಸ್ಥಾನ ಗಳಿಸಿತ್ತು. ನಗರದಲ್ಲಿನ ಸ್ವತ್ಛತೆ, ನೈರ್ಮಲ್ಯ, ಪಾರ್ಕ್ ಹಾಗೂ ಒಳಚರಂಡಿ ವ್ಯವಸ್ಥೆ ಮಾನದಂಡ ಆಧರಿಸಿ ಆಯ್ಕೆ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಸ್ವತ್ಛತೆ, ನೈರ್ಮಲ್ಯ ಹಾಗೂ ಒಳಚರಂಡಿ ನೆಟ್‌ವರ್ಕ್ ಅತ್ಯುತ್ತಮವಾಗಿದೆ. ಆದರೆ ಪಾರ್ಕ್‌ಗಳ ಸಂಖ್ಯೆ ತೀರಾ ಕಡಿಮೆ. ಇನ್ನೊಂದೆಡೆ ಸ್ವತ್ಛತಾ ಅಭಿಯಾನದ ಆ್ಯಪ್‌ನ್ನು ಎಷ್ಟು ಮಂದಿ ಡೌನ್‌ಲೋಡ್ ಮಾಡಿ ನಗರ ಸ್ವತ್ಛತೆಗೆ ಸ್ಪಂದಿಸುತ್ತಿದ್ದಾರೆಂಬುದನ್ನೂ ಪರಿಗಣಿಸಲಾಗುತ್ತದೆ. ಈ ವಿಚಾರದಲ್ಲೂ ಮಂಗಳೂರು ನಗರ ಹಿಂದೆ ಇದೆ. ಇಲ್ಲದೇ ಹೋದರೆ ಮೈಸೂರಿನಂತೆ ನಮ್ಮ ನಗರಕ್ಕೂ ಮೊದಲ ಸ್ಥಾನ ಲಭ್ಯವಾಗುತ್ತಿತ್ತು’ ಎಂದು ಮನಪಾ ಅಧಿಕಾರಿಯೋರ್ವರು ಉದಯವಾಣಿ “ಸುದಿನ’ಕ್ಕೆ ತಿಳಿಸಿದ್ದಾರೆ.
“ಈ ಬಾರಿಯ ಸರ್ವೆ ಪ್ರಯುಕ್ತ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದವರು ಸುಮಾರು 4 ತಿಂಗಳ ಹಿಂದೆ ಮಂಗಳೂರು ನಗರಕ್ಕೆ ಆಗಮಿಸಿದ್ದರು. ನಗರದ ಸ್ವತ್ಛತೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕಿದ್ದರು. ಹೀಗಿರುವಾಗ ಈ ಬಾರಿಯೂ ಹತ್ತು ಕ್ಲೀನ್‌ಸಿಟಿ ನಗರಗಳ ಪಟ್ಟಿಯಲ್ಲಿ ಮಂಗಳೂರು ಸ್ಥಾನ ಪಡೆದುಕೊಳ್ಳುವ ಬಗ್ಗೆ ನಮಗೆ ವಿಶ್ವಾಸವಿದೆ. ಆದರೆ, ಸದ್ಯಕ್ಕೆ ಈ ಪ್ರಶಸ್ತಿಗೆ ಆಯ್ಕೆ ಆಗಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಯಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2017ರ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಒಟ್ಟು 1 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದ 500 ನಗರ ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ದೊಡ್ಡ ಮಟ್ಟದ ಸ್ಪರ್ಧೆ ಇರುವುದ ರಿಂದ ಮಂಗಳೂರಿಗೆ ಯಾವ ಸ್ಥಾನ ದೊರೆಯಬಹುದು ಎಂಬುದನ್ನು ಕಾದು ನೋಡ ಬೇಕಿದೆ. ಅದೇ 2016ರ ಸ್ಪರ್ಧೆಯಲ್ಲಿ ಸುಮಾರು 10 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 73 ನಗರಗಳನ್ನು ಆಯ್ಕೆ ಮಾಡಿ ಸ್ವತ್ಛತೆ ಕುರಿತ ಸಮೀಕ್ಷೆ ನಡೆಸಲಾಗಿತ್ತು.
ಸ್ವತ್ಛ ಮಂಗಳೂರು ಕೊಡುಗೆ
ಮಂಗಳೂರು ಒಂದು ವೇಳೆ ಈ ಬಾರಿಯ ಅತ್ಯುತ್ತಮ ಸ್ವತ್ಛತಾ ನಗರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದರೆ ಅದಕ್ಕೆ ರಾಮಕೃಷ್ಣ ಮಿಷನ್‌ನ ಸ್ವತ್ಛ ಮಂಗಳೂರು ಅಭಿಯಾನದ ಕೊಡುಗೆ ಕಾರಣ. ಏಕೆಂದರೆ ರಾಮಕೃಷ್ಣ ಮಿಷನ್ ನಗರದಲ್ಲಿ ಪ್ರತೀ ವಾರವೂ ಸ್ವತ್ಛತಾ ಕಾರ್ಯ ನಡೆಸುತ್ತಿದೆ. ಸತತ ಮೂರು ವರ್ಷಗಳಿಂದ ಸ್ವತ್ಛತೆ ಕೈಗೊಳ್ಳುತ್ತಿದ್ದು, ಇದೀಗ ಮೂರನೇ ಹಂತದ ಕಾರ್ಯ ನಡೆಯುತ್ತಿದೆ.
ಈ ಕುರಿತು ಉದಯವಾಣಿ “ಸುದಿನ’ ಜತೆ ಮಾತನಾಡಿದ ರಾಮಕೃಷ್ಣ ಮಿಷನ್‌ನ ಸ್ವತ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜೀ, “ಸ್ವತ್ಛ ಮಂಗಳೂರು ಕಲ್ಪನೆ ಹಿಂದಿನಿಂದಲೇ ನಗರದಲ್ಲಿ ಇತ್ತು. ರಾಮಕೃಷ್ಣ ಮಿಷನ್‌ನಿಂದ ಈ ಕಾರ್ಯ ಆರಂಭವಾದ ಮೇಲೆ ಜನ ಸ್ವತ್ಛತೆಗೆ ಹೆಚ್ಚು ಒತ್ತು ಕೊಟ್ಟರು. ಇದರಿಂದ ನಗರದಲ್ಲಿಯೂ ಸ್ವತ್ಛತೆ ಬಗ್ಗೆ ಜನ ಜಾಗೃತಿ ಮೂಡಿರುವುದು ನಿಜ. ಆದಾಗ್ಯೂ ಮಂಗಳೂರು ಸ್ವತ್ಛ ನಗರ ಪ್ರಶಸ್ತಿ ಪಡೆದು ಕೊಂಡರೆ ಕೇವಲ ರಾಮಕೃಷ್ಣ ಮಿಷನ್ ಒಂದೇ ಅಲ್ಲ; ಇದಕ್ಕೆ ಎಲ್ಲರ ಸಂಘಟಿತ ಕೊಡುಗೆ ಕಾರಣವಾಗಲಿದೆ. ಒಂದು ವೇಳೆ ಪ್ರಶಸ್ತಿ ಬಂದರೆ ನಮಗೂ ಅತೀ ಹೆಚ್ಚಿನ ಖುಷಿಯಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
– ಧನ್ಯಾ ಬಾಳೆಕಜೆ