ಹುಬ್ಬಳ್ಳಿ: ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ಚಿಗರಿ ಬಸ್‌ನ ಚಿತ್ರಣದಿಂದ ಕಂಗೊಳಿಸುತ್ತಿದ್ದು, ಲೋಕಾರ್ಪಣೆ ಸಮಾರಂಭ ನೆರವೇರಿತು.
ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿ, ಚಿಕ್ಕ ಮಕ್ಕಳಲ್ಲಿ ಬಿಆರ್‌ಟಿಎಸ್ ಸೇವೆಯ ಕುರಿತು ಅರಿವು ಮೂಡಿಸುವ ಈ ಕಾರ್ಯ ಅತ್ಯಂತ ಸ್ವಾಗತಾರ್ಹ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿನ ಮಕ್ಕಳಿಗೆ ಚಿಗರಿ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಪಂ ಇಒ ಡಾ| ಮಹೇಶ ಕುರಿ ಮಾತನಾಡಿ, ಅಲ್ಲಾಪುರ ಗ್ರಾಮ ಅಭಿವೃದ್ಧಿ ಕಾರ್ಯ ಹಾಗೂ ಯೋಜನೆ ಅನುಷ್ಠಾನದಲ್ಲಿ ರಾಜ್ಯದ ಗಮನ ಸೆಳೆದಿದೆ. ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು ಈ ಗ್ರಾಮಕ್ಕೆ ಬಂದು ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ಪಡೆಯುವಂತಾಗಿದೆ. ತಾಪಂ ವತಿಯಿಂದ ಯಾವುದೇ ಯೋಜನೆ, ಅನುದಾನ ನೀಡುವುದಾದರೆ ಈ ಗ್ರಾಮಕ್ಕೆ ಪ್ರಾಶಸ್ತÂ ನೀಡಬೇಕು ಎನ್ನುವ ಮನಸ್ಥಿತಿ ಅಧಿಕಾರಿಗಳಲ್ಲಿ ಬೆಳೆದಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ, ಈ ಕಾರ್ಯಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಹಣ ನೀಡಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಗ್ರಾಮಕ್ಕೆ ಬಸ್ ನಿಲ್ದಾಣದ ಅಗತ್ಯವಾಗಿದ್ದು, ಸಾರಿಗೆ ಸಂಸ್ಥೆ ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಶಾಲೆಯಲ್ಲಿ ಗ್ರಂಥಾಲಯ ಉದ್ದೇಶಕ್ಕೆ ನಿರುಪಯುಕ್ತ ಮಿನಿ ಬಸ್ಸೊಂದನ್ನು ಸಾರಿಗೆ ಸಂಸ್ಥೆ ನೀಡಿದರೆ ರಾಜ್ಯದಲ್ಲಿ ಮಾದರಿ ಗ್ರಂಥಾಲಯ ಮಾಡುತ್ತೇವೆ. ಇದಕ್ಕಾಗಿ ದಾನಿಗಳು ಮುಂದೆ ಬಂದಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಖಾದರಸಾಬ್ ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ರುದ್ರಪ್ಪ ಭಜಂತ್ರಿ, ಗ್ರಾಪಂ ಸದಸ್ಯ ಚಿದಾನಂದ ಪೂಜಾರಿ, ಮುಖ್ಯ ಪಶುವೈದ್ಯಾಧಿಕಾರಿ ಡಾ| ಬಿ.ಬಿ. ಅವಾರಿ, ಎಇಇ ವಿ. ಆಕಾಶ, ಎ.ವೈ. ನಾಯ್ಕರ್, ಮುತ್ತು ರಾಯರಡ್ಡಿ, ಹುಸೇನಸಾಬ ಖಾಲೇಬಾಯಿ ಇನ್ನಿತರರಿದ್ದರು.
ಸ್ಮಾರ್ಟ್ ಕ್ಲಾಸ್ ದೇಣಿಗೆ
ಗ್ರಾಮದಲ್ಲಿನ ಅಭಿವೃದ್ಧಿ ಕಾರ್ಯದಿಂದಾಗಿ ಅಣ್ಣಿಗೇರಿ ಮೂಲದ ಸ್ನೇಹಾ ದೇಸಾಯಿ ಅವರು ಈ ಶಾಲೆಗೆ ಸುಮಾರು 1 ಲಕ್ಷ ರೂ.ಗಿಂತ ಹೆಚ್ಚಿನ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಗ್ರಾಮಕ್ಕಾಗಿ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಸದಸ್ಯರನ್ನು ಸಂಪರ್ಕಿಸಿದಾಗ ಶಾಲೆಗೆ ಅಗತ್ಯವಿರುವ ಸ್ಮಾರ್ಟ್‌ಕ್ಲಾಸ್ ಕೊಡಿಸಿ ಎನ್ನುವ ಬೇಡಿಕೆ ಮೇರೆಗೆ ಈ ವ್ಯವಸ್ಥೆ ಕಲ್ಪಿಸಿದ್ದಾರೆ. ಸ್ಮಾರ್ಟ್ ಕ್ಲಾಸ್ ಹೊಂದಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಇದು ಮೊದಲು ಎನ್ನಲಾಗಿದೆ. ಇರುವ ಎರಡು ಕೊಠಡಿಯಲ್ಲಿ ಒಂದು ಸ್ಮಾರ್ಟ್ ಆಗಿದೆ. ಈ ಸಂದರ್ಭದಲ್ಲಿ ಸ್ನೇಹಾ ದೇಸಾಯಿ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.