Advertisement

ಒಂದಾಗಿ ಶಾಲೆಗೆ ಹೋದವರು ಒಟ್ಟಿಗೆ ಮಸಣ ಸೇರಿದರು: ಗುರುತಿಸಲಾಗದಷ್ಟು ಜರ್ಜರಿತವಾದ ಮೃತದೇಹಗಳು

02:30 PM Jan 15, 2021 | Team Udayavani |

ಧಾರವಾಡ: ಇಲ್ಲಿನ ಹೊರವಲಯದ ಇಟ್ಟಿಗಟ್ಟಿ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್​ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ.

Advertisement

ಆದರೆ ಅಪಘಾತದ ತೀವ್ರತೆಗೆ ಮೃತದೇಹಗಳು ಗುರುತಿಸಲಾಗದಷ್ಟು ಜರ್ಜರಿತವಾಗಿದೆ. ಮೃತರ ಸಂಬಂಧಿಕರು ಬಟ್ಟೆಯ ಸಹಾಯದಿಂದ ಗುರುತಿಸುವ ಪ್ರಯತ್ನ ನಡೆಸುತ್ತಿದ್ದು, ಇದುವರೆಗೆ ಐವರ ಗುರುತು ಪತ್ತೆ ಹಚ್ಚಲಾಗಿದೆ.

ರಜನಿ ಶ್ರೀನಿವಾಸ (47ವ), ವೈದ್ಯೆ ಪ್ರೀತಿ ರವಿಕುಮಾರ (46 ವ), ಪರಂಜ್ಯೋತಿ ಶಶಿಧರ (47 ವ), ವೀಣಾ ಮತ್ತಿಗಳ್ಳಿ (46 ವ), ಮಂಜುಳಾ ನಟೇಶ (46 ವ) ಅವರ ಮೃತದೇಹಗಳನ್ನು ಗುರುತಿಸಲಾಗಿದೆ.

ಇನ್ನುಳಿದ ಮೃತ ದೇಹಗಳ ಪತ್ತೆ ಮಾಡಲು ಪೋಲಿಸರಿಗೆ ಕಷ್ಟವಾಗುತ್ತಿದೆ. ಕೆಲವು ದೇಹಗಳ ಗುರುತಿಸುವುದು ಕಷ್ಟವಾಗುತ್ತಿದೆ ಎಂದು ಕಿಮ್ಸ್ ವೈದ್ಯರೂ ಹೇಳಿದ್ದಾರೆ.

Advertisement

ಇದನ್ನೂ ಓದಿ:ಹಾಡಹಗಲೇ ಅಟ್ಟಿಸಿಕೊಂಡು ಹೋಗಿ ಸಹೋದರರಿಬ್ಬರ ಕೊಚ್ಚಿ ಕೊಲೆ!

ಬಾಲ್ಯ ಸ್ನೇಹಿತೆಯರು

ಮೃತರೆಲ್ಲರೂ ದಾವಣಗೆರೆ ಮೂಲದವರು. ದಾವಣಗೆರೆಯ ಸೇಂಟ್‌ ಪಾಲ್ಸ್‌ ಕಾನ್ವಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಇತ್ತೀಚಿಗೆ ನಡೆದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಹಲವು ವರ್ಷಗಳ ನಂತರ ಭೇಟಿಯಾಗಿದ್ದ ಬಾಲ್ಯ ಸ್ನೇಹಿತೆಯರು ಗೋವಾಕ್ಕೆ ಪ್ರವಾಸ ಹೊರಟಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿ ಮುಂಜಾನೆ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದರು.

ಧಾರವಾಡದ ಇಟ್ಟಿಗಟ್ಟಿ ಬೈಪಾಸ್‌ ಸಮೀಪ ಬೆಳಗ್ಗೆ 7.30ರ ವೇಳೆಗೆ ಯಮರೂಪಿಯಾಗಿ ಬಂದ ಮರಳು ಸಾಗಣೆ ಟಿಪ್ಪರ್‌ ಲಾರಿಯು ಟೆಂಪೋ ಟ್ರಾವೆಲರ್​ಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ನಜ್ಜುಗುಜ್ಜಾಗಿದೆ. ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಡಿಯೋ: ಧಾರವಾಡ ಬೈಪಾಸ್ ನಲ್ಲಿ ಟೆಂಪೋ-ಲಾರಿ ನಡುವೆ ಭೀಕರ ಅಪಘಾತ | Udayavani

ಶವಾಗಾರದ ಬಳಿ ಮೃತರ ಸಂಬಂಧಿಕರು, ಸ್ನೇಹಿತರು ಹಾಗೂ ಪೊಲೀಸ್ ಆಯುಕ್ತ ಲಾಬುರಾಮ ಮೊಕ್ಕಾಂ ಹೂಡಿದ್ದಾರೆ. ಇನ್ನೂ ಕೆಲ ಸಂಬಂಧಿಕರು ದಾವಣಗೆರೆಯಿಂದ ಕಿಮ್ಸ್ ಹಾಗೂ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ.

ಅಂತಿಮ ಸೆಲ್ಫಿ

ಗೋವಾ ಪ್ರವಾಸಕ್ಕೆಂದು ವಾಹನ ಹತ್ತುತ್ತಿದ್ದಂತೆ ಬಾಲ್ಯ ಸ್ನೇಹಿತೆಯರೆಲ್ಲರೂ ಮೊಬೈಲ್​ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸಾ​ಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದರು. ಅವರು ಬದುಕಿದ್ದಾಗ ತೆಗೆದ ಕೊನೆಯ ಫೋಟೋ ಇದೇ ಎನ್ನುತ್ತ ಕುಟುಂಬಸ್ಥರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

“ಎಲ್ಲರೂ ಶಾಲೆಯ ಬಾಲ್ಯ ಸ್ನೇಹಿತರು. ಗುಂಪು ಮಾಡಿ ಪ್ರವಾಸ ಮಾಡುತ್ತಿದ್ದರು. ತಡರಾತ್ರಿ ದಾವಣಗೆರೆ ಬಿಟ್ಟಿದ್ದರು. ಬೆಳಗಾಗುವಷ್ಟರಲ್ಲಿ ದುರಂತ ಸಂಭವಿಸಿದೆ. ಅಯ್ಯೋ ದೇವರೆ ನಾವೆನನ್ನು ನೋಡುತ್ತಿದ್ದೇವೆ” ಎಂದು ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಗಳಾದ ಅರವಿಂದ ಮತ್ತು ಸಿದ್ದು ದುಃಖ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಶವಾಗಾರದ ಬಳಿ ಮೃತರ ಸಂಬಂಧಿಗಳು ಬಂಧುಗಳೆಲ್ಲರೂ ರೊಧಿಸುತ್ತಿದ್ದು, ಅಪಘಾತದ ಸ್ಥಳಕ್ಕೂ ಕೆಲವರು ಭೇಟಿಕೊಟ್ಟಿದ್ದಾರೆ.

ಪ್ರಧಾನಿ ಸಂತಾಪ: ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ  ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next