Advertisement
“ದಾದಾ ಈಸ್ ಬ್ಯಾಕ್’ ಆ ಸಾಲಿಗೆ ಸೇರುವ ಇನ್ನೊಂದು ಸಿನಿಮಾ. ಇಲ್ಲಿ ಭೂಗತ ಜಗತ್ತಿನ ದಾದಾ ಆಗುವುದಕ್ಕೆ ಜಿದ್ದಾಜಿದ್ದಿ ಇದೆ, ಗ್ಯಾಂಗ್‌ವಾರ್‌ಗಳಿವೆ, ರಕ್ತದೋಕುಳಿಯೂ ಇದೆ. ಅದೆಲ್ಲದರ ಹಿಂದೆ ಒಂದು ದೊಡ್ಡ ತ್ಯಾಗಮಯ ಕಥೆ ಇದೆ. ಬಹುಶಃ “ದಾದಾ ಈಸ್ ಬ್ಯಾಕ್’ ಚಿತ್ರವು ಸ್ವಲ್ಪ ವಿಭಿನ್ನವಾಗುವುದಕ್ಕೆ ಅದೇ ಕಾರಣ. ಇಲ್ಲಿ ನಿರ್ದೇಶಕ ಸಂತು ಗ್ಯಾಂಗ್‌ವಾರ್‌ಗೆ ಅದೆಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೋ, ಅಷ್ಟೇ ಪ್ರಾಮುಖ್ಯತೆಯನ್ನು ಸೆಂಟಿಮೆಂಟಲ್ ದೃಶ್ಯಗಳ ಕಡೆಗೂ ಕೊಟ್ಟಿದ್ದಾರೆ. ಹಾಗಾಗಿಯೇ ಇದೊಂದು ರೌಡಿಸಂ ಹಿನ್ನಲೆಯ ಚಿತ್ರವಾದರೂ, ಇಲ್ಲಿ ಸ್ನೇಹ, ಸಂಬಂಧ, ಪ್ರೀತಿ ಎಲ್ಲವೂ ಇದೆ.
Related Articles
Advertisement
ಆದರೂ ಮೊದಲಾರ್ಧ ಏನೂ ವಿಶೇಷ ನಡೆದಿಲ್ಲ ಎಂಬ ಭಾವನೆ ಆಗಾಗ್ಗೆ ಪ್ರೇಕ್ಷಕರಿಗೆ ಬರುತ್ತಲೇ ಇರುತ್ತದೆ. ಅದೆಲ್ಲಾ ಸರಿ ಹೋಗಬೇಕೆಂದರೆ, ಚಿತ್ರದ ದ್ವಿತೀಯಾರ್ಧದವರೆಗೂ ಕಾಯಬೇಕು. ಅದರಲ್ಲೂ ಕೊನೆಯ ಕಾಲು ಗಂಟೆ ಚಿತ್ರವನ್ನು ಸಂತು ನಿರೂಪಿಸಿರುವ ರೀತಿ, ಅದಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿರುವ ಸಾಥ್ ಖುಷಿಕೊಡುತ್ತದೆ. ಬಹುಶಃ ಈ ಚಿತ್ರಕ್ಕೆ ಇನ್ನಷ್ಟು ಪಕ್ವ ಕಲಾವಿದರು ಇದ್ದಿದ್ದರೆ ಚಿತ್ರ ಇನ್ನೊಂದು ಲೆವೆಲ್‌ಗೆ ಹೋಗುತಿತ್ತೇನೋ? ಪಾರ್ಥಿಬನ್ ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ದಾದಾ ಪಾತ್ರದಲ್ಲಿ ಅವರು ತಿಣುಕಾಡಿದ್ದಾರೆ.
ಬಹುಶಃ ಭಾಷೆಯ ಸಮಸ್ಯೆಯಿಂದಾಗಿ ಅವರು ಡಲ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಇನ್ನು ದೊಡ್ಡ-ಚಿಕ್ಕನಾಗಿ ಕಾಣಿಸಿಕೊಂಡಿರುವ ಅಜಯ್ ರಾಜ್ ಮತ್ತು ಅರುಣ್ ನಟನೆಯಲ್ಲಿ ಇನ್ನಷ್ಟು ದೂರ ಸಾಗಬೇಕು. ಶ್ರಾವ್ಯ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ. ಇವರ ಮಧ್ಯೆ ನಿಜಕ್ಕೂ ತಮ್ಮ ಅಭಿನಯದಿಂದ ಖುಷಿಪಡಿಸುವುದೆಂದರೆ ಅದು ಶರತ್ ಲೋಹಿತಾಶ್ವ, ಸುಧಾರಾಣಿ ಮತ್ತು ದತ್ತಣ್ಣ. ಪತ್ರಕರ್ತ ವಿನಾಯಕ್ ರಾಮ್ ಕಲಗಾರು ಸಣ್ಣ ಪಾತ್ರದಲ್ಲೇ ಗಮನಸೆಳೆಯುತ್ತಾರೆ.
ಇನ್ನು ನಾಗೇಶ್ ಆಚಾರ್ಯ ಇಡೀ ಪರಿಸರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಾಡುಗಳಿಗಿಂಥ, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ ಅನೂಪ್ ಸೀಳಿನ್. “ಗೊಂಬೆಗಳ ಲವ್’ನಂತಹ ವಿಭಿನ್ನ ಚಿತ್ರ ಮಾಡಿದ್ದ ಸಂತು, ಈಗ ರೌಡಿಸಂ ಚಿತ್ರ ಮಾಡುವ ಮೂಲಕ ಹೊಸ ಪ್ರಯೋಗವೊಂದಕ್ಕೆ ತಮ್ಮನ್ನು ತಾವೇ ಒಡ್ಡುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಇದು ಇನ್ನೊಂದು ಹೊಸ ಪ್ರಯೋಗ ಎಂದು ಹೇಳುವುದು ಕಷ್ಟ. ಆದರೆ, ಸಂತು ಮಟ್ಟಿಗೆ ಇದೊಂದು ಹೊಸ ಪ್ರಯೋಗ ಎಂದರೆ ತಪ್ಪಿಲ್ಲ.
ಚಿತ್ರ: ದಾದಾ ಈಸ್ ಬ್ಯಾಕ್ನಿರ್ದೇಶನ: ಸಂತು
ನಿರ್ಮಾಣ: ಡಾ ಶಂಕರ್ ಮತ್ತು ಅಜಯ್ ರಾಜ್ ಅರಸ್
ತಾರಾಗಣ: ಪಾರ್ಥಿಬನ್, ಅರುಣ್, ಅಜಯ್ ರಾಜ್ ಅರಸ್, ಶರತ್ ಲೋಹಿತಾಶ್ವ, ಸುಧಾರಾಣಿ, ಶ್ರಾವ್ಯ, ದತ್ತಣ್ಣ ಮುಂತಾದವರು * ಚೇತನ್ ನಾಡಿಗೇರ್