ಹೈದರಾಬಾದ್: 12ನೇ ತರಗತಿಯ ಯುವತಿಯೊಬ್ಬಳು ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಹೈದರಾಬಾದ್ ನ ಭಾರತ್ ನಗರದಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಮಗಳ ಸಾವಿನ ಹಿಂದೆ ವಾಮಾಚಾರ ಹಿಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ದಿನಗಳಿಂದ ಕೆಲವು ಅಪರಿಚಿತ ವ್ಯಕ್ತಿಗಳು ‘ಕ್ಷುದ್ರ ಪೂಜೆʼ(ವಾಮಾಚಾರ) ನಡೆಸುತ್ತಿದ್ದಾರೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಅವರ ಮನೆಯ ಮುಂದೆ ನಿಂಬೆಹಣ್ಣುಗಳು ಮತ್ತು ದೀಪಗಳನ್ನು ಯಾರೋ ಇಡುತ್ತಿದ್ದಾರೆ. ಈ ಬಗ್ಗೆ ನಾವು ಪೊಲೀಸರಿಗೂ ಹೇಳಿದ್ದೇವೆ ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಮೃತ ಯುವತಿಯ ಮನೆಯವರು.
ಗುರುವಾರ ಬೆಳಗ್ಗೆ ಮನೆಯ ಮುಂದೆ ನಿಂಬೆಹಣ್ಣು ಮತ್ತು ಮೇಣದ ಬತ್ತಿಯಂತಹ ಅವಶೇಷಗಳು ಪತ್ತೆಯಾಗಿವೆ. ಒಳಗೆ ಹೋಗಿ ಮಗಳನ್ನು ನೋಡಿದಾಗ, ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಮನೆಯವರು ಹೇಳುತ್ತಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಬಗ್ಗೆ ದೂರು ದಾಖಲಾಗಿದ್ದು, ಪೋಷಕರು “ಬ್ಲ್ಯಾಕ್ ಮ್ಯಾಜಿಕ್” ಬಗ್ಗೆ ದೂರಿನಲ್ಲಿ ಉಲ್ಲೇಖಿಸಿಲ್ಲ ಎಂದು ಕುಲಸುಂಪುರ ಪೊಲೀಸ್ ಇನ್ಸ್ ಪೆಕ್ಟರ್ ಟಿ ಅಶೋಕ್ ಕುಮಾರ್ ಹೇಳಿದ್ದಾರೆ. ಮೃತ ಯುವತಿ ಅಪ್ರಾಪ್ತ ಆಗಿರುವ ಕಾರಣ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡಿಲ್ಲ ಎಂದು ವರದಿ ತಿಳಿಸಿದೆ.