ತಿರುವನಂತಪುರ : ಶಿಕ್ಷಕರು ನೀಡಿದ್ದ ಕಿರುಕುಳ, ಮಾನಸಿಕ ಹಿಂಸೆಯಿಂದ ಬೇಸತ್ತು, ಎರಡು ದಿನಗಳ ಹಿಂದೆ ತನ್ನ ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದ ಕೇರಳದ ಖಾಸಗಿ ಶಾಲೆಯೊಂದರ 10ನೇ ತರಗತಿಯ ವಿದ್ಯಾರ್ಥಿನಿ ಇಂದು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಶಾಲೆಯ ಶಿಕ್ಷಕರು ನೀಡುತ್ತಿದ್ದ ಕಿರುಕುಳ, ಮಾನಸಿಕ ಹಿಂಸೆಯಿಂದಾಗಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಮನೆವರು ದೂರು ನೀಡಿದ್ದು ಪೊಲೀಸರು ಕೊಲ್ಲಂ ನಗರದ ತಂಗಶೆರಿ ಪ್ರದೇಶದಲ್ಲಿರುವ ಟ್ರಿನಿಟಿ ಲೀಸಿಯಂ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಇದೇ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ತನ್ನ ಸಹೋದರಿ ತರಗತಿಯಲ್ಲಿ ಮಾತನಾಡಿದಳೆಂಬ ಕಾರಣಕ್ಕೆ ಆಕೆಗೆ ಶಿಕ್ಷಕರು ನೀಡಿದ್ದ ಶಿಕ್ಷೆಯನ್ನು ಈಕೆ ಪ್ರಶ್ನಿಸಿದ್ದಳು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿಯ ಚಿಕ್ಕಪ್ಪ ಪೊಲೀಸರಿಗೆ ಕೊಟ್ಟಿರುವ ದೂರಿನ ಪ್ರಕಾರ, “ಶಾಲೆಯ ಶಿಕ್ಷಕರು ಆಕೆಗೆ ಮಧ್ಯಾಹ್ನ ಊಟಕ್ಕೂ ಬಿಡುವು ಕೊಡುತ್ತಿರಲಿಲ್ಲ; ನಿನ್ನನ್ನು ಬೋರ್ಡ್ ಪರೀಕ್ಷೆಗೆ ಕೂರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು’ ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ಮಧ್ಯಾಹ್ನ 1.30ರ ಹೊತ್ತಿಗೆ ಬಾಲಕಿಯು ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯ ಹೇಳಿಕೆಯನ್ನು ಪಡೆದುಕೊಳ್ಳಲು ಪೊಲೀಸರು ವಿಫಲರಾಗಿದ್ದರು. ಆದರೆ ಆಕೆಯ ತಂದೆಯ ಹೇಳಿಕೆಯನ್ನು ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.