ಹೊಳೆಹೊನ್ನೂರು: ಜಮೀನಿನಲ್ಲಿ ಹೊಸದಾಗಿ ನಾಟಿ ಮಾಡಿದ 300 ಅಡಿಕೆ ಗಿಡಗಳನ್ನು ಕಿತ್ತು ಹಾಕಿರುವ ಬಗ್ಗೆ ಆನವೇರಿಯ ರೈತ ಲೊಕೇಶಪ್ಪ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆನವೇರಿಯ ಲೊಕೇಶಪ್ಪ ಜಂಗರಮನಹಳ್ಳಿ ತಮಗೆ ಸೇರಿದ ಅರ್ಧ ಎಕರೆ ಜಮೀನಿನಲ್ಲಿ ಕಳೆದ ಒಂದು ತಿಂಗಳ ಹಿಂದೆ 300 ಅಡಿಕೆ ಸಸಿಗಳನ್ನು ನೆಟ್ಟಿದ್ದರು.
ಅಡಿಕೆ ಗಿಡ ನೆಟ್ಟು ನಂತರ ಕ್ಯಾತೆ ತೆಗೆದಿರುವ ಅದೇ ಗ್ರಾಮದ ರಫೀಕ್ ಹಾಗೂ ಅವರ ಸಹೋದರ ಫಯಾಜ್ ಲೋಕೇಶಪ್ಪ ಜೊತೆ ಜಗಳವಾಡಿ ಅವರ ಎದುರೆ ಗಿಡಗಳನ್ನು ಕಿತ್ತುಹಾಕಿ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗುತ್ತಿದೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದವರು ಜಗಳ ಬಿಡಿಸಿ ಕಳಿಸಿದ್ದಾರೆ.
ಇದೇ ಜಮೀನಿನ ವಿಚಾರ ಕೆಲ ದಿನಗಳ ಹಿಂದೆ ಗ್ರಾಮ ಮುಖಂಡರೊಬ್ಬರ ಸಮ್ಮುಖದಲ್ಲಿ ರಾಜಿ ಸಂದಾನ ಏರ್ಪಟ್ಟಿತ್ತು ಎನ್ನಲಾಗಿದೆ. ವಿವಾದ ತೀರ್ಮಾನದ ನಂತರ ಲೊಕೇಶಪ್ಪನ ಲಕ್ಷಾಂತರ ರೂ. ಸಾಲ ಮಾಡಿ ಜಮೀನು ಸಮತಟ್ಟು ಮಾಡಿಸಿಕೊಂಡು ಅಡಿಕೆ ಸಸಿಗಳನ್ನು ನೆಟ್ಟಿದ್ದರು.
ಗುರುವಾರ ರಾತ್ರಿ ರಫೀಕ್ ಹಾಗೂ ಫಯಾಜ್ ಸಹೋದರರು ಲೊಕೇಶಪ್ಪನ ತೋಟಕ್ಕೆ ನುಗ್ಗಿ 300 ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದಾರೆ. ಇದರ ಪರಿಣಾಮ ತಮಗೆ ತಮ್ಮ ಜಮೀನು ಉಳಿಸಿಕೊಡಿ ಎಂದು ಲೊಕೇಶಪ್ಪ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.
ತಮಗೆ ಇಬ್ಬರಿಂದ ಜೀವ ಬೆದರಿಕೆ ಇದೆ ಹಾಗೂ ಅಡಿಕೆ ಗಿಡ ನಾಶವಾಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಲೋಕೇಶಪ್ಪನವರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.