ಬೆಂಗಳೂರು: ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಪ್ರತ್ಯೇಕ ಪ್ರವಾಸದ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಇದೀಗ ಅಪಸ್ವರ ಎತ್ತಿದ್ದಾರೆ. ಇದೇ ವೇಳೆ ಸಚಿವರಾದ ರಮೇಶ್ ಕುಮಾರ್, ಕೆ.ಜೆ. ಜಾರ್ಜ್ ಹಾಗೂ ಎಚ್.ಎಂ. ರೇವಣ್ಣ ಯು.ಟಿ. ಖಾದರ್ ಯಾತ್ರೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಜಾಫರ್ ಷರೀಫ್, ಪ್ರತ್ಯೇಕ ಪ್ರವಾಸದ ಅಗತ್ಯವಿರಲಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ನಿರ್ಮಾಣವಾಗುತ್ತದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಒಟ್ಟಿಗೆ ಪ್ರವಾಸ ಮಾಡಬೇಕಿತ್ತು. ಈ ವಿಚಾರದಲ್ಲಿ ಪಕ್ಷದ ನಾಯಕರು ನನ್ನ ಸಲಹೆ ಕೇಳಿಲ್ಲ. ಕೇಳಿದ್ದರೆ, ಒಟ್ಟಾಗಿ ಪ್ರವಾಸ ಮಾಡುವಂತೆ ಹೇಳುತ್ತಿದ್ದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಆದರೆ, ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಮೇಶ್‌ಕುಮಾರ್, ನಾವೆಲ್ಲ ಸೇರಿ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಪ್ರವಾಸದ ಬಗ್ಗೆ ಯಾರಿಗೂ ಯಾವುದೇ ಅಸಮಧಾನವಿಲ್ಲ. ಜಾಫರ್ ಶರೀಫ್ ಹಿರಿಯರು ಅವರು ಮೆಕ್ಕಾ ಯಾತ್ರೆಗೆ (ಉಮ್ರಾ) ತೆರಳುತ್ತಿದ್ದಾರೆ. ಅಲ್ಲಿ ನಮ್ಮ ಪರವಾಗಿ ಪ್ರಾರ್ಥನೆ ಮಾಡುತ್ತಾರೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಸರ್ಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಆರಂಭಿಸಿದ್ದಾರೆ. ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹೋಗುತ್ತಿದ್ದಾರೆ. ಜಾಫರ್ ಷರೀಫ್ ಪಕ್ಷದ ಹಿರಿಯ ನಾಯಕರು ಅವರ ಸಲಹೆಗಳಿಗೆ ನಾವು ತುಂಬಾ ಗೌರವ ಕೊಡುತ್ತೇವೆ. ಪ್ರತ್ಯೇಕ ಪ್ರವಾಸದಿಂದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಯವರು ಪ್ರವಾಸ ಹೋಗಿದ್ದು ಸರ್ಕಾರದ ಕಾರ್ಯಕ್ರಮವೇ ಹೊರತು ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಮುಖ್ಯಮಂತ್ರಿಯವರ ಪ್ರವಾಸವನ್ನು ಸಮರ್ಥಿಸಿಕೊಂಡರು. ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಎಂ. ರೇವಣ್ಣ, ಮುಖ್ಯಮಂತ್ರಿಯವರ ಹಾಗೂ ಪಕ್ಷದ ಅಧ್ಯಕ್ಷರ ಪ್ರತ್ಯೇಕ ಪ್ರವಾಸವನ್ನು ವಲಸಿಗರ ಮತ್ತು ಮೂಲ ಕಾಂಗ್ರೆಸ್ಸಿಗರ ಪ್ರವಾಸ ಎಂದು ಹೇಳುವುದು ಸರಿಯಲ್ಲ. ಪಕ್ಷದ ವಿಚಾರ ಬಂದಾಗ ವಲಸಿಗರು, ಮೂಲದವರು ಎಂಬ ಪ್ರಶ್ನೆ ಬರುವುದಿಲ್ಲ. ಎಲ್ಲರೂ ಸೇರಿ ಪಕ್ಷ ಬಲಪಡಿಸಲು ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ ಶಾಸಕರು ಗೆದ್ದಿರುವ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಪ್ರವಾಸ ಮಾಡಿದರೆ, ಬೇರೆ ಪಕ್ಷಗಳ ಶಾಸಕರು ಇರುವ ಕ್ಷೇತ್ರಗಳಲ್ಲಿ ಪಕ್ಷದ ಅಧ್ಯಕ್ಷರೊಂದಿಗೆ ಮಲ್ಲಿಕಾರ್ಜುನ್ ಖರ್ಗೆ, ವೀರಪ್ಪ ಮೊಯ್ಲಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.