Advertisement

ವಕೀಲರ ಕೊರೊನಾ ಮಾತಿಗೆ ಸಿಜೆ ವಿಚಲಿತ

12:45 AM Mar 17, 2020 | Lakshmi GovindaRaj |

ಬೆಂಗಳೂರು: ಮಾರಕ ಕೊರೊನಾ ವೈರಸ್‌ ವಿಚಾರವಾಗಿ ಹಿರಿಯ ವಕೀಲರೊಬ್ಬರು ಆಡಿದ ಮಾತು ಗಲಿಬಿಲಿ ಉಂಟು ಮಾಡಿದ ಪ್ರಸಂಗ ಸೋಮವಾರ ಹೈಕೋರ್ಟ್‌ನಲ್ಲಿ ನಡೆಯಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಮಧ್ಯಾಹ್ನ ಪ್ರಕರಣದವೊಂದರ ವಿಚಾರಣೆ ನಡೆಯುತ್ತಿತ್ತು.

Advertisement

ಈ ವೇಳೆ ರಾಜ್ಯ ಸರ್ಕಾರ ಸ್ವಾಮ್ಯದ ಮಂಡಳಿಯೊಂದರ ಪರ ಹಾಜರಿದ್ದ ಹಿರಿಯ ವಕೀಲರೊಬ್ಬರು ಮಾಸ್ಕ್ ಹಾಕಿಕೊಂಡು ವಾದ ಮಂಡಿಸುತ್ತಿದ್ದರು. ವಾದ ಮಂಡಿಸಿದ ಬಳಿಕ ಏಕಾಏಕಿ “ಮೈ ಲಾರ್ಡ್‌ ಕ್ಷಮೆ ಇರಲಿ’ ಎಂದು ಕೇಳಿದರು. ಕ್ಷಮೆ ಏಕೆ ಎನ್ನುವಂತೆ ಮುಖ್ಯ ನ್ಯಾಯಮೂರ್ತಿಗಳು ಹುಬ್ಬೇರಿಸಿ ನೋಡಿದರು.

“ನನ್ನ ಕಕ್ಷಿದಾರರೊಬ್ಬರಿಗೆ ಕೊರೊನಾ ವೈರಸ್‌ ಅಂಟಿಕೊಂಡಿದೆ. ನಾನು ಅವರನ್ನು ಭೇಟಿಯಾಗಬೇಕಾಯಿತು. ಅದಕ್ಕಾಗಿ “ಸೆಲ್ಫ್ ಐಸೋಲೇಷನ್‌’ ಮಾಡಿಕೊಂಡಿದ್ದು, ಮಾಸ್ಕ್ ಹಾಕಿ ಕೊಂಡಿದ್ದೇನೆ ಎಂದು ಹೇಳಿದರು’ ಇದನ್ನು ಕೇಳಿದ್ದೇ ತಡ ಮುಖ್ಯ ನ್ಯಾಯಮೂರ್ತಿ, ವಕೀಲರು ತಬ್ಬಿಬ್ಟಾದರು.

“ನೀವು ಕೋರ್ಟ್‌ ಗೆ ಬರಬಾದಿತ್ತು, ತಕ್ಷಣ ನೀವು ಹೊರ ಹೋಗುವುದೇ ದೊಡ್ಡ ಐಸೋಲೇಷನ್‌. ನೀವು ಹಾಜರಾಗದಿದ್ದರೆ ವಿಚಾರಣೆ ಮುಂದೂಡಲಾಗುವುದು, ಯಾವುದೇ ವ್ಯತಿರಿಕ್ತ ಆದೇಶ ಅಥವಾ ನಿರ್ದೇಶನ ನೀಡಲಾಗುವುದಿಲ್ಲ ಎಂದರು. ಸ್ವಯಂ ನಿಗಾ ವಹಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಆದರೆ, ತುರ್ತು ಪ್ರಕರಣ ಇರುವುದರಿಂದ ಮುಂಜಾಗ್ರತೆ ದೃಷ್ಟಿಯಿಂದ ಮಾಸ್ಕ್ ಧರಿಸಿ ಬಂದಿದ್ದೇನೆ ಎಂದು ಹೇಳುತ್ತಿರುವಾಗಲೇ ಆ ಹಿರಿಯ ವಕೀಲರು ಜೋರಾಗಿ ಕೆಮ್ಮಿದರು. ಇದರಿಂದ ವಿಚಲಿತಗೊಂಡ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಿರಿಯ ಸಹೋದ್ಯೋಗಿ ವಾದ ಮಂಡಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ನೀವು ಹೊರ ಹೋಗುವುದು ಒಳ್ಳೆಯದು ಎಂದರು.

Advertisement

ಈ ವೇಳೆ ಕೋರ್ಟ್‌ನಲ್ಲಿದ್ದ ವಕೀಲರು ಕೆಲ ಕ್ಷಣ ಗಲಿಬಿಲಿಗೊಂಡರು. ವಕೀಲರು ಕೋರ್ಟ್‌ ಹಾಲ್‌ನಿಂದ ಹೊರಹೋದ ಮೇಲೆ “ನಿಮ್ಮ ಸಿನೀಯರ್‌ಗೆ 14 ದಿನದ ನಿಗಾ ಅವಧಿಯಲ್ಲಿ (ಕ್ವಾರಂಟೇನ್‌ ಪಿರಿಯಡ್‌) ಇರುವಂತೆ ಹೇಳಿ ಎಂದು ಕಿರಿಯ ಸಹೋದ್ಯೋಗಿ ವಕೀಲರಿಗೆ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು.

ಕಕ್ಷಿದಾರರಿಗೆ ಕೋರ್ಟ್‌ ಹಾಲ್‌ ಪ್ರವೇಶ ನಿರ್ಬಂಧ
ಬೆಂಗಳೂರು: ಕೊರೊನಾ ವೈರಸ್‌ ಹರಡುವ ಆತಂಕ ಸೋಮವಾರ ಹೈಕೋರ್ಟ್‌ಗೂ ಕಾಡಿತು. ಕೊರೊನಾ ವೈರಸ್‌ ಸೋಂಕು ಹರಡುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಕೋರ್ಟ್‌ ಪ್ರಧಾನ ಪೀಠದ ಕೋರ್ಟ್‌ ಹಾಲ್‌ ಪ್ರವೇಶಿಸದಂತೆ ಕಕ್ಷಿದಾರರಿಗೆ ನಿರ್ಬಂಧ ಹೇರಲಾಗಿತ್ತು.

ವಕೀಲರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ನ್ಯಾಯಪೀಠಗಳು ತುರ್ತು ಪ್ರಕರಣಗಳ ವಿಚಾರಣೆಗೆ ಆದ್ಯತೆ ನೀಡಿ, ಉಳಿದ ಪ್ರಕರಣಗಳ ವಿಚಾರಣೆಗೆ ದಿನಾಂಕ ನೀಡಲಾಯಿತು. ಅನೇಕ ವಕೀಲರು ತಮ್ಮ ಪ್ರಕರಣಗಳ ವಿಚಾರಣೆ ಮುಗಿದ ಕೂಡಲೇ ಹೈಕೋರ್ಟ್‌ನಿಂದ ಹೊರ ನಡೆದರು. ಕೋರ್ಟ್‌ ಹಾಲ್‌ಗ‌ಳಲ್ಲಿ ಅನಗತ್ಯವಾಗಿ ಕುಳಿತಿದ್ದ ಸರ್ಕಾರಿ ಅಧಿಕಾರಿಗಳನ್ನೂ ಹೊರಗಡೆ ಕಳುಹಿಸಲಾಯಿತು.

ಕಕ್ಷಿದಾರರನ್ನು ಹೊರ ಕಳುಹಿಸಿದ ಸಿಜೆ: ಮುಖ್ಯ ನ್ಯಾಯಮೂರ್ತಿ ಕೋರ್ಟ್‌ ಹಾಲ್‌ನಲ್ಲಿ ಬೆಳಗ್ಗೆ ಕಕ್ಷಿದಾರರು, ಸರ್ಕಾರಿ ಅಧಿಕಾರಿ ಹಾಗೂ ಸಾರ್ವಜನಿಕರು ತುಂಬಿದ್ದರು. ಇದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಓಕಾ, ಅನವಶ್ಯಕವಾಗಿರುವ ಕಕ್ಷಿದಾರರು, ಅಧಿಕಾರಿಗಳು ಕೋರ್ಟ್‌ ಹಾಲ್‌ನಿಂದ ಹೊರಗೆ ಹೋಗುವಂತೆ ಮೌಖೀಕವಾಗಿ ಸೂಚಿಸಿದರು.

ಸಿಜೆಐ ವಿಡಿಯೋ ಕಾನ್ಫರೆನ್ಸ್: ಸೋಮವಾರ ಮಧ್ಯಾಹ್ನವಷ್ಟೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಎಲ್ಲ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜತೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ್ದಾರೆ. ಹೇಗೂ ಕೋರ್ಟ್‌ಗಳಿಗೆ ಶೀಘ್ರವೇ ಬೇಸಿಗೆ ರಜೆ ಆರಂಭವಾಗಲಿದೆ. ಆದಾಗ್ಯೂ, ಈಗ ಕೋರ್ಟ್‌ ಬಂದ್‌ ಮಾಡುವುದು ಬೇಡ. ತುರ್ತು ಪ್ರಕರಣಗಳನ್ನು ಮಾತ್ರವೇ ವಿಚಾರಣೆ ನಡೆಸಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next