ಹೈದರಾಬಾದ್:ಕೋವಿಡ್ 19 ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಈ ವೇಳೆ ನಡೆಯುತ್ತಿರುವ ಹಲವು ಸಂಗತಿಗಳು ಗಮನಸೆಳೆಯುವಂತಿದ್ದು, ಹೈದರಾಬಾದ್ ನಲ್ಲಿ ಅಂತಹ ಎರಡು ಘಟನೆಗಳು ನಡೆದಿದೆ.
ಕೋವಿಡ್ 19 ಭೀತಿಯಿಂದ ಜನಸಂಚಾರ ಇಲ್ಲದ ಪರಿಣಾಮ ಹೈದರಾಬಾದ್ ನ ಗೋಲ್ಕೊಂಡಾ ಪ್ರದೇಶದ ದರ್ವಾಝಾ ಎಂಬಲ್ಲಿ ಕಾಡಿನಿಂದ ಬಂದಿದ್ದ ಅಪರೂಪದ ಪುಣುಗು ಬೆಕ್ಕು ಕಂಡು ಬಂದಿತ್ತು. ಕೊನೆಗೂ ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಪುಣುಗು ಬೆಕ್ಕನ್ನು ಹಿಡಿದು ಮರಳಿ ಕಾಡಿಗೆ ಒಯ್ದು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಪುಣುಗು ಬೆಕ್ಕು ಎಲ್ಲಿಂದ ಬಂತು ಹಾಗೂ ಈ ಪ್ರದೇಶದೊಳಕ್ಕೆ ಹೇಗೆ ಬಂತು ಎಂಬ ಬಗ್ಗೆ ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಮತ್ತೊಂದು ಪ್ರಕರಣದಲ್ಲಿ ಹೈದರಾಬಾದ್ ನ ಕೈಗಾರಿಕಾ ಪ್ರದೇಶವಾದ ಮೈಲಾರ್ ದೇವಿ ಪಲ್ಲೈ ಸಮೀಪದ ರಸ್ತೆಯಲ್ಲಿ ಗಾಯಗೊಂಡ ಚಿರತೆಯೊಂದು ಪತ್ತೆಯಾಗಿತ್ತು. ತುಂಬಾ ಗಂಭೀರವಾಗಿ ಗಾಯಗೊಂಡಿದ್ದ ಚಿರತೆ ಮೇಲೇಳಲು ಸಾಧ್ಯವಾಗದೆ ಬಿದ್ದಿತ್ತು ಎಂದು ವರದಿ ತಿಳಿಸಿದೆ.
ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ರಕ್ಷಿಸಿದ್ದಾರೆ. ಹೀಗೆ ಲಾಕ್ ಡೌನ್ ನಡುವೆ ಮುಂಬೈಗೆ ಸಾವಿರಾರು ಸಂಖ್ಯೆಯಲ್ಲಿ ಫ್ಲೇಮಿಂಗೋ ವಲಸೆ ಬಂದಿರುವುದು, ನೋಯ್ಡಾದಲ್ಲಿ ನಿಲ್ಗಾಯಿ ಹಾಗೂ ಕೋಲ್ಕತಾ ಪ್ರದೇಶದಲ್ಲಿ ಡಾಲ್ಫಿನ್ಸ್ ಆಗಮಿಸಿರುವ ಬಗ್ಗೆ ವರದಿಯಾಗಿತ್ತು.