Advertisement

ಕಸ ಇಲ್ಲದಿರುವ ಸಿಟಿ “ಸೂಪರ್‌ ಸಿಟಿ’

12:52 AM Jan 20, 2020 | Lakshmi GovindaRaj |

ಬೆಂಗಳೂರು: ಕಪ್‌ ಗಳಿಸಿ, ಕಸ ಅಳಿಸಿ!, ಕಸದ ಪ್ರಮಾಣ ಕಡಿಮೆ ಮಾಡಿ, ರನ್‌ ರೇಟ್‌ ಅಲ್ಲ, ಕಸ ಇಲ್ಲದಿರುವ ಸಿಟಿ ಸೂಪರ್‌ ಸಿಟಿ! ಇವು ಭಾನುವಾರ ಬಿಬಿಎಂಪಿಯ ವೆಬ್‌ಸೈಟ್‌ ಹಾಗೂ ಅಧಿಕಾರಿಗಳ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳಲ್ಲಿ ಕಂಡು ಬಂದ ಘೋಷವಾಕ್ಯಗಳು.

Advertisement

ಸ್ವಚ್ಛ ಸರ್ವೇಕ್ಷಣ್‌ ಸರ್ವೇಯಲ್ಲಿ ಸಾರ್ವಜನಿಕರು ಭಾಗವಹಿಸಿ ಉತ್ತಮ ರ್‍ಯಾಂಕ್‌ ಗಳಿಸುವುದಕ್ಕೆ ಸಹ ಕಾರ ನೀಡಬೇಕು ಎನ್ನುವ ಉದ್ದೇಶದಿಂದ ಪಾಲಿಕೆ ಸರ್ಕಸ್‌ ನಡೆಸುತ್ತಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಭಾನುವಾರ ನಡೆದ ಪಂದ್ಯವನ್ನು ಪಾಲಿಕೆ ಬಿಟ್ಟಿಲ್ಲ! ನಗರ ಸ್ವಚ್ಛವಾಗಿಡಲು ಮೂರು ಕಸದ ಬುಟ್ಟಿ ಸಾಕು’,”ಬಾಲನ್ನು ಎಸೆಯಿರಿ- ಕಸವನ್ನಲ್ಲ’ ಎನ್ನುವ ಆಕರ್ಷಕ ಸಾಲುಗಳ ಮೂಲಕ ಜಾಗೃತಿ ಮೂಡಿಸಿದೆ.

ಪಾಲಿಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಸ್ವಚ್ಛ ಸರ್ವೇಕ್ಷಣ 2020 ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌, ಒಂದು ಕೋಟಿಗೂ ಅಧಿಕ ಜನ ಸಂಖ್ಯೆ ಇರುವ ನಗರದಲ್ಲಿ ಸ್ವಚ್ಛಸರ್ವೇಕ್ಷಣದಲ್ಲಿ ಸಾರ್ವಜನಿಕರು ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ನಾವು ಏನು ಮಾಡಿದ್ದೇವೆ, ಏನು ಮಾಡಿಲ್ಲ ಎಂದು ತಿಳಿಸಿದರೆ ಸಾಕು. ಮಾಡದಿರುವ ಕೆಲಸವನ್ನೂ ಮಾಡಿದ್ದೇವೆ ಎಂದು ಹೇಳಿ ಎಂದು ಕೇಳುತ್ತಿಲ್ಲ ಎಂದರು. ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲೇ ನಮ್ಮ ಬೆಂಗಳೂರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರ್ವೇ ಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ನಗರದ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಅಭಿಪ್ರಾಯ ಹಂಚಿಕೊಳ್ಳಲು ಜ.31ರವರೆಗೆ ಕಾಲಾವಕಾಶವಿದ್ದು,

ಒಂದು ಲಕ್ಷ ಜನ ಇದರಲ್ಲಿ ಭಾಗವಹಿಸುವಂತೆ ಮಾಡುವ ಗುರಿ ಇದೆ. ಆದರೆ, ಈ ವರೆಗೆ ಕೇವಲ 12 ಸಾವಿರ ಮಂದಿ ಮಾತ್ರ ಭಾಗವಹಿಸಿ ನಗರದ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ತುಮಕೂರಿನಲ್ಲಿ 25ಸಾವಿರ ಮಂದಿ, ಮೈಸೂರು ನಗರದಿಂದ 33 ಸಾವಿರ ಮಂದಿ ನಗರದ ಸ್ವಚ್ಛತೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿ ಸಿದ್ದಾರೆ. ಆದರೆ, ಬೆಂಗಳೂರಿನ ಜನರ ಪ್ರತಿಕ್ರಿಯೆ ನಿರಾಶದಾಯಕವಾಗಿದೆ ಎಂದು ಹೇಳಿದರು.

Advertisement

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಪುಷ್ಪ ಮೇಳದಲ್ಲಿಯೂ ಸ್ವಚ್ಛಸರ್ವೇಕ್ಷಣದ ಜಾಗೃತಿ ಮೂಡಿಸುವುದಕ್ಕೆ ಈ ಬಾರಿ ಒಂದು ಮಳಿಗೆ ಹಾಕಲಾಗಿದೆ. ಅಲ್ಲಿ ಹೇಗೆ ಸ್ವಚ್ಛ ಸರ್ವೇಕ್ಷಣದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಾಗೃತಿ ಮೂಡಿಸುವುದಕ್ಕೆ 50ಲಕ್ಷ ರೂ. ವೆಚ್ಚ: ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಭಾಗವಹಿಸುವುದಕ್ಕೆ ಉತ್ತೇಜನ ನೀಡುವ ಉದ್ದೇಶ ದಿಂದ ಬಿಬಿಎಂಪಿ ರೇಡಿಯೋ, ವೆಬ್‌ಸೈಟ್‌, ಫೇಸ್‌ಬುಕ್‌,ಟ್ವಿಟರ್‌ನ ಮೂಲಕ ಹಾಗೂ ಸ್ಟಾಲ್‌ಗ‌ಳ ಮೂಲಕ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಭಾಗವಹಿಸುವುದಕ್ಕೆ ಹಾಗೂ ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ಸಹ ಕಾರ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಂದಾಜು 50ಲಕ್ಷ ರೂ. ವೆಚ್ಚವಾಗಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೇಡಿಯಂನಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದ ಪಾಲಿಕೆ: ಸ್ವಚ್ಛ ಸರ್ವೇಕ್ಷಣ್‌ ಸರ್ವೇಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಚಿನ್ನಸ್ವಾಮಿ ಕ್ರೀಡಾಂಗಣ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಪಾಲಿಕೆ ಭಾನುವಾರ ಸಂರ್ಪಕಿಸಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿಗಳಿಗೆ ಪಾಲಿಕೆಯ ವಿಶೇಷ ಆಯುಕ್ತ ರಂದೀಪ್‌ ಪತ್ರ ಬರೆದಿದ್ದು, ಭಾರತ ಮತ್ತು ಆಸ್ಟೇಲಿಯಾ ನಡುವಿನ ಪಂದ್ಯದ ವೇಳೆ ಕಸ ವಿಲೇವಾರಿ ಹಾಗೂ ಸ್ವಚ್ಛ ಸರ್ವೇಕ್ಷಣ್‌ ಬಗ್ಗೆ ಸಂದೇಶ ಹಾಗೂ ಮನವಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ದ್ದಾರೆ. ಆದರೆ, ಇದಕ್ಕೆ ಆಡಳಿತ ಮಂಡಳಿ ಯಿಂದ ಅನುಮತಿ ಸಿಕ್ಕಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮ ಕಸ ನೀವೇ ಗೊಬ್ಬರ ಮಾಡಿಕೊಳ್ಳಿ: ಸಾರ್ವಜನಿಕರ ಗಮನ ಸೆಳೆದು ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆಯ ಅಧಿಕಾರಿಗಳು ಈಗ ವಿಡಿಯೋ ಮೊರೆ ಹೋಗಿದ್ದಾರೆ. ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ವಿಶೇಷ ಆಯುಕ್ತ ರಂದೀಪ್‌ ಹಾಗೂ ಜಂಟಿ ಆಯುಕ್ತ ಸಫ‌ರಾಜ್‌ ಖಾನ್‌ ಅವರು ಕಸ ವಿಲೇವಾರಿಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಸಾರ್ವಜನಿಕರಲ್ಲಿ ವಿಲೇವಾರಿಗೆ ಸಹಕಾರಿಸುವಂತೆ ಮನವಿ ಮಾಡುತ್ತಿದ್ದಾರೆ.

ಅಲ್ಲದೆ, ಟ್ವಿಟರ್‌ ಖಾತೆಯಲ್ಲೂ ವಿಶೇಷ ಶೀರ್ಷಿಕೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು,ಟೀಂ ಇಂಡಿಯಾ, ಇಂಡಿಯಾ ಮತ್ತು ಆಸ್ಟ್ರೇಲಿಯಾ, ಸ್ವಚ್ಛಭಾರತ್‌, ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಟ್ಯಾಗ್‌ ಮಾಡಲಾಗಿದೆ! ಭಾನುವಾರ ಕಸ ಕಾಂಪೋಸ್ಟ್‌ಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಹಂಚಿಕೊಂಡಿದ್ದು, ಈ ವಿಡಿಯೋಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ವೇಯಲ್ಲಿ ನೀವೂ ಭಾಗವಹಿಸಿ: www.swachhsurvekshanನಲ್ಲಿ ನೀವೂ ಭಾಗವಹಿಸಿ ನಗರದ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಇದರಲ್ಲಿ ಲೋಪದೋಷಗಳ ಬಗ್ಗೆ ಸುಳ್ಳು ಮಾಹಿತಿ ನೀಡುವ ಅವಶ್ಯಕತೆ ಇಲ್ಲ. ಇರುವುದನ್ನು ಯಥಾವತ್ತು ದಾಖಲಿಸಿದರೆ ಸಾಕು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next