ಬೆಂಗಳೂರು: ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಆಚರಿಸಲು ನಗರದ ಮುಸ್ಲಿಂ ಸಮುದಾಯ ಸಜ್ಜಾಗಿದೆ. ಇಸ್ಲಾಮಿ ಚಂದ್ರಮಾನ ಕ್ಯಾಲೆಂಡರ್‌ನ ಕೊನೆಯ ತಿಂಗಳು “ದುಲ್‌ಹಜ್’ನ 10ನೇ ತಾರೀಕಿನಂದು ಪ್ರತಿ ವರ್ಷ ವಿಶ್ವಾದ್ಯಂತ ಮುಸ್ಲಿಮರು ಬಕ್ರೀದ್ ಆಚರಿಸುತ್ತಾರೆ. ಅದರಂತೆ ಆ.12ರಂದು (ಸೋಮವಾರ) ರಾಜ್ಯ, ರಾಜಧಾನಿಯಲ್ಲಿ ಮುಸ್ಲಿಮರು ಹಬ್ಬ ಆಚರಿಸುತ್ತಿದ್ದಾರೆ.
ಹಬ್ಬದ ಪ್ರಯುಕ್ತ ನಗರದ ಎಲ್ಲ ಈದ್ಗಾ ಮೈದಾನ ಹಾಗೂ ಪ್ರಮುಖ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಖುದ್ದೂಸ್ ಸಾಬ್ ಈದ್ಗಾ, ಮೈಸೂರು ರಸ್ತೆ, ಟ್ಯಾನರಿ ರಸ್ತೆ, ಜಯನಗರ, ಚಾಮರಾಜಪೇಟೆ ಈದ್ಗಾ ಮೈದಾನ ಸೇರಿದಂತೆ ಬನ್ನೇರುಘಟ್ಟ ರಸ್ತೆಯ ಬಿಲಾಲ್ ಮಸೀದಿ, ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ, ಶಿವಾಜಿನಗರದ ಸುಲ್ತಾನ್‌ಷಾ ಮಸೀದಿ, ಛೋಟಾ ಮೈದಾನ್, ಫ್ರೆಜರ್‌ಟೌನ್‌ನ ಫುಟ್ಬಾಲ್ ಗ್ರೌಂಡ್ ಸೇರಿದಂತೆ ನಗರದ ಬಹುತೇಕ ಎಲ್ಲ ಮಸೀದಿಗಳು ಹಾಗೂ ಕೆಲ ಪ್ರಮುಖ ಸ್ಥಳಗಳಲ್ಲಿ ಪ್ರಾರ್ಥನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇಸ್ಲಾಮಿನ ಪ್ರವಾದಿ ಹಜ್ರತ್ ಇಬ್ರಾಹೀಮರು ತಮ್ಮ ಮಗನನ್ನು ದೇವ ಮಾರ್ಗದಲ್ಲಿ ಬಲಿ ಅರ್ಪಿಸಲು ಮುಂದಾದಾಗ ದೇವಾದೇಶದಂತೆ ಮಗನ ಜಾಗದಲ್ಲಿ ಪ್ರಾಣಿಯೊಂದು ಉದ್ಭವವಾದ ಐತಿಹ್ಯ ಪಾಲಿಸಲು ಮುಸ್ಲಿಮರು ಬಕ್ರೀದ್ ದಿನ ಪ್ರಾಣಿ ಬಲಿ ನೀಡುತ್ತಾರೆ. ಇದೇ ದುಲ್‌ಹಜ್ ಮಾಸದಲ್ಲಿ 1ರಿಂದ 10ನೇ ತಾರೀಕಿನವರೆಗೆ ವಿಶ್ವದ ಮುಸ್ಲಿಮರು ಮೆಕ್ಕಾ-ಮದೀನಾದಲ್ಲಿ ಹಜ್ ಕರ್ಮ ನಿರ್ವಹಿಸುತ್ತಾರೆ.
ಹಬ್ಬದ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಸಮುದಾಯ ರಾಜಕೀಯ ಮುಖಂಡರು, ಧಾರ್ಮಿಕ ವಿದ್ವಾಂಸರು ಹಾಗೂ ವಿವಿಧ ಸಂಘ-ಸಂಸ್ಥೆಗಳು ನಗರ ಪೊಲೀಸ್ ಆಯುಕ್ತರಿಗೆ ಈಗಾಗಲೇ ಮನವಿ ಸಲ್ಲಿಸಿದ್ದು, ಆಯುಕ್ತರು ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ. ಇದೇ ವೇಳೆ ಪ್ರಾಣಿ ಬಲಿ ನೀಡುವಾಗ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಮುದಾಯದ ಜನರಲ್ಲಿ ಮುಖಂಡರು ಮನವಿ ಮಾಡಿದ್ದಾರೆ.
ಬಕ್ರೀದ್ ಆಚರಣೆ ವೇಳೆ ಶಾಂತಿ-ಸೌಹಾರ್ದತೆ ಮುಖ್ಯ. ಇದಕ್ಕಾಗಿ ಮುಸ್ಲಿಮರು ಇತರ ಸಮುದಾಯಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
-ಮಹಮ್ಮದ್ ಅಥರುಲ್ಲಾ ಶರೀಫ್, ರಾಜ್ಯ ಮುಸ್ಲಿಂ ಮುತ್ತಹಿದ ಮಹಾಜ್ ಜಂಟಿ ಸಂಚಾಲಕ