Advertisement

ನಗರದ ಸಚಿವರ ಗೆಲುವಿನ ಓಟ

11:14 AM May 16, 2018 | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ನಡೆಸಿದ ಐದು ವರ್ಷದ ಪೂರ್ಣ ಸರ್ಕಾರದಲ್ಲಿದ್ದ ಸುಮಾರು ಸಚಿವರು ಸೋಲನ್ನು ಅನುಭವಿಸಿದ್ದರೂ, ನಗರದ ಸಚಿವರು ಗೆಲುವಿಗೆ ಬೇಕಾದಷ್ಟು ಮತ ಪಡೆದು ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.

Advertisement

ನಗರಾಭಿವೃದ್ಧಿ ಸಚಿವರಾಗಿದ್ದ ರೋಷನ್‌ ಬೇಗ್‌ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕಟ್ಟಾಸುಬ್ರಹ್ಮಣ್ಯ ನಾಯ್ಡು ವಿರುದ್ಧ 59,742 ಮತ ಪಡೆದು 15,040 ಮತಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಶಿವಾಜಿನಗರ ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಉಳಿಸಿಕೊಂಡಿದ್ದಾರೆ ಮತ್ತು ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿದ್ದಾರೆ.

ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಅವರನ್ನು ಸರ್ವಜ್ಞನಗರದ ಜನ ಕೈ ಹಿಡಿದಿದ್ದಾರೆ. 50 ಸಾವಿರಕ್ಕೂ ಅಧಿಕ ಅಂತರದಿಂದ ಜಯ ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಎಂ.ಎನ್‌.ರೆಡ್ಡಿಯವರು 56,651 ಮತ ಪಡೆಯಲಷ್ಟೆ ಸಕ್ತರಾಗಿದ್ದಾರೆ.

ಸಾರಿಗೆ ಮತ್ತು ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿಯವರು ಬಿಟಿಎಂ ಲೇಔಟ್‌ನಲ್ಲಿ ಮತ್ತೂಂದು ಜಯ ಸಾಧಿಸುವ ಮೂಲಕ ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಯ ಲಲ್ಲೇಶ್‌ ರೆಡ್ಡಿ ವಿರುದ್ಧ 20,478 ಮತಗಳ ಅಂತರದಿಂದ ಜಯ ತಮ್ಮದಾಗಿಸಿಕೊಂಡಿದ್ದಾರೆ. ಭರ್ತಿ ಐದು ವರ್ಷ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಕೃಷ್ಣಬೈರೇಗೌಡ ಅವರು ಕೂಡ ಬ್ಯಾಟರಾಯಪುರ ಕ್ಷೇತ್ರವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಬಿಜೆಪಿಯ ಎ. ರವಿ ವಿರುದ್ಧ 5,671 ಮತಗಳ ಅಂತರದಲ್ಲಿ ಜಯ ದಾಖಲಿಸಿಕೊಂಡಿದ್ದಾರೆ.

ವಸತಿ ಸಚಿವರಾಗಿದ್ದ ಎಂ.ಕೃಷ್ಣಪ್ಪ ಅವರು ವಿಜಯನಗರ ಕ್ಷೇತ್ರದಲ್ಲಿ ಮತ್ತೆ ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಎಚ್‌.ರವೀಂದ್ರ ವಿರುದ್ಧ 2,775 ಮತಗಳ ಅಂತರದಲ್ಲಿ ಜಯ ಸಾಧಿಸಿಕೊಂಡಿದ್ದಾರೆ. ಈ ಹಿಂದೆ ಆಹಾರ ಸಚಿವರಾಗಿದ್ದು, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್‌ ಗುಂಡೂರಾವ್‌ ಅವರು ಕೂಡ ಗಾಂಧಿನಗರದಲ್ಲಿ ಜಯಭೇರಿ ಬಾರಿಸುವ ಮೂಲಕ ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದರು. ಬಿಜೆಪಿಯ ಸಪ್ತಗಿರಿಗೌಡ ಅವರ ವಿರುದ್ಧ 10,074 ಮತಗಳ ಅಂತರದಲ್ಲಿ ಜಯ ಸಾಧಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next