ಕಲಬುರಗಿ: ನಗರದ ಕುಸನೂರ ರಸ್ತೆಯಲ್ಲಿನ ಧನವಂತ್ರಿ ಕಾಲೋನಿಯ ಘಂಟಿ ಲೇಔಟ್‌ನಲ್ಲಿರುವ ಬೀದಿ ಬಸವಣ್ಣ ದೇಗುಲವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಲು ಮುಂದಾದಾಗ ಸ್ಥಳೀಯ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ದೇಗುಲ ತೆರವಿಗೆ ಆಗಮಿಸುತ್ತಿದ್ದಂತೆ ದಿಢೀರನೇ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಜಮಾಗೊಂಡು ಪಾಲಿಕೆ ವಿರುದ್ಧ ಘೋಷಣೆ ಕೂಗಿ, ನಗರದ ವರ್ತುಲ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ವೃತ್ತದಲ್ಲಿ ರಸ್ತೆ ತಡೆದು, ಮಾನವ ಸರಪಳಿ ರೂಪಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಮುನ್ಸೂಚನೆ ಇಲ್ಲದೇ ದೇವಸ್ಥಾನ ತೆರವಿಗೆ ಮುಂದಾಗಿದ್ದಕ್ಕೆ ಪ್ರಬಲ ವಿರೋಧ ವ್ಯಕ್ತವಾಯಿತು. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡೋದಿಲ್ಲ. ಪಾಲಿಕೆ ಅಧಿಕಾರಿಗಳು ಹಿಂದುಗಳ ದೇವಾಲಯಗಳನ್ನೇ ಗುರಿಯಾಗಿಟ್ಟುಕೊಂಡು ನೆಲಸಮಕ್ಕೆ ಮುಂದಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಅಧಿಕಾರಿಗಳು ಆಗಾಗ್ಗೆ ಹೀಗೆ ದಿಢೀರನೇ ಬಂದು ಹಿಂದೂಗಳ ದೇವಾಲಯಗಳನ್ನು ನೆಲಸಮ ಮಾಡುತ್ತಿರುವುದನ್ನು ನೋಡಿದರೆ ಯಾವುದೋ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಆದರೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ಪಾಲಿಕೆ ಚುನಾವಣೆ ಸಮಯದಲ್ಲಿ ಇಂತಹ ಕೆಲಸಕ್ಕೆ ಕೈ ಹಾಕಿದ ಅಧಿಕಾರಿಗಳು, ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ. ಮಹಾನಗರಪಾಲಿಕೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಮಯದಲ್ಲಿಯೇ ಮಹಾನಗರಪಾಲಿಕೆ ಅಧಿಕಾರಿಗಳು ವಿವಾವದವೊಂದನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ನಂತರ ಪೊಲೀಸ್ ಅಧಿಕಾರಿ ಹಾಗೂ ಮಹಾನಗರ ಪಾಲಿಕೆಯ ವಲಯ ಆಯುಕ್ತರು ಬಂದು ಗುಡಿಯನ್ನು ತೆರವುಗೊಳಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ಕೊಟ್ಟನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಚಂದ್ರಕಾಂತ ಕಾಳಗಿ,
ಆರ್.ಜಿ. ಶೆಟಗಾರ್, ಉಮೇಶ್ ಶೆಟ್ಟಿ, ಬಾಬು ಸುಂಠಾಣ, ವೀರಣ್ಣ ಹೊನ್ನಳ್ಳಿ, ಅಮಿತ ಚುಡಗುಂಪಿ, ಉದಯ ಪಾಟೀಲ, ಪ್ರಶಾಂತ ಗುಡ್ಡ, ಅಶ್ವಿನ್, ಸಾಗರ, ಸಚಿನ, ಬಸವ, ಶರಣು, ವಿಜಯ, ನಂದ್ಯಾಳ ಹಾಗೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.