Advertisement

ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ನಾಗರಿಕರ ಆಗ್ರಹ

02:33 AM Mar 13, 2021 | Team Udayavani |

ಮಲ್ಪೆ: ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಮಾಡಿ ಬೊಟ್ಟಲ ಬಗ್ಗುಮುಂಡ ಪರಿಸರದಲ್ಲಿ ಪ್ರತೀ ಹುಣ್ಣಿಮೆ, ಅಮಾವಾಸ್ಯೆ ಸಂದರ್ಭದಲ್ಲಿ ಕೆಲವು ದಿನಗಳವರೆಗೆ ಉಪ್ಪು ನೀರು ಮೇಲೆ ಬಂದು ಗದ್ದೆಗಳಿಗೆ ನುಗ್ಗುವುದರಿಂದ ಈ ಭಾಗದ ರೈತರ ಕೃಷಿ ಕಾರ್ಯಕ್ಕೆ ಸಮಸ್ಯೆಯಾಗುತ್ತಿದ್ದು ಭೂಮಿ ಇದ್ದರೂ ಕೃಷಿ ಮಾಡಲಾಗದೇ ಹಡಿಲು ಬಿಡುವ ಪರಿಸ್ಥಿತಿ ಎದುರಾಗಿದೆ.

Advertisement

ಸಮರ್ಪಕ ತಡೆಗೋಡೆ ಇಲ್ಲ
ಇಲ್ಲಿನ ಪಾಪನಾಶಿನಿ ನದಿಗೆ ಹೊಂದಿ ಕೊಂಡಿರುವ ತೋಡಿನಲ್ಲಿ ಭರತದ ಸಮಯದಲ್ಲಿ ನೀರು ಉಕ್ಕಿ ಸಮೀಪದ ಗದ್ದೆಗೆ ಹರಿದು ಬರುತ್ತಿದ್ದ ಪರಿಣಾಮ ಪರಿಸರದ ಗದ್ದೆ ಸಂಪೂರ್ಣ ಉಪ್ಪು ನೀರಿನ ಅಂಶವನ್ನು ಹೀರಿದೆ. ಈ ಭಾಗದಲ್ಲಿ ಸಮರ್ಪಕವಾದ ತಡೆಗೋಡೆ ಇಲ್ಲದೆ ಉಪ್ಪು ನೀರು ಗದ್ದೆಗೆ ಹರಿದು ಬರುತ್ತಿದೆ.

ಈ ಹಿಂದೆ ಉಪ್ಪು ನೀರು ಗದ್ದೆಗೆ ನುಗ್ಗಿದಾಗ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಯಾವುದೇ ಶಾಶ್ವತ ಪರಿಹಾರವನ್ನು ಒದಗಿಸಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಡಿಯುವ ನೀರಿಗೂ ಸಂಕಷ್ಟ
ಉಪ್ಪು ನೀರಿನ ಹಾವಳಿಗೆ ಕೇವಲ ಕೃಷಿ ಭೂಮಿ ಹಾಳಾಗಿಲ್ಲ. ಈ ಪ್ರದೇಶದ ಮನೆಯ ಬಾವಿಯ ನೀರು ಉಪ್ಪಾಗಿ ಇಲ್ಲಿನವರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಲ್ಲಿನ ಬಗ್ಗುಪಂಜುರ್ಲಿ ದೈವಸ್ಥಾನದ ಬಾವಿ ನೀರು ಹಾಳಾಗಿದ್ದು ದೈವದ ಕೆಲಸಕ್ಕೂ ಬಳಸಲಾಗುತ್ತಿಲ್ಲ ಎನ್ನಲಾಗಿದೆ.

ಶೀಘ್ರ ಕ್ರಮ ಕೈಗೊಳ್ಳಿ
ಈ ಹಿಂದೆ ಪ್ರತೀ ವರ್ಷ ಭತ್ತ, ಧಾನ್ಯ ಮತ್ತು ತರಕಾರಿ ಬೆಳೆಯನ್ನು ಬೆಳೆಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷದಲ್ಲಿ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದರಿಂದ ಕೃಷಿಗೆ ಆಯೋಗ್ಯವಾಗಿದೆ. ಇದರಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಆಡಳಿತಕ್ಕೆ ಅದೆಷ್ಟು ಬಾರಿ ಮನವಿ ಮಾಡಿದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಉಪ್ಪು ನೀರಿನ ತಡೆಯುವಿಕೆಗೆ ಸರಿಯಾದ ಕ್ರಮ ಕೈಗೊಳ್ಳಬೇಕು. -ಚಂದ್ರಶೇಖರ್‌ ಬಗ್ಗುಮನೆ, ಸ್ಥಳೀಯರು

Advertisement

ಕಾಮಗಾರಿ ಶೀಘ್ರ ಆರಂಭ
ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ 3 ಕೋ. ರೂ ವೆಚ್ಚದ ತಡೆಗೋಡೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾಗಿದೆ. ಕಲ್ಮಾಡಿ ಗರೋಡಿಯಿಂದ ಬಗ್ಗುಮುಂಡದವರೆಗೆ ನದಿ ದಂಡೆ ಕಾಮಗಾರಿ ಅತೀ ಶೀಘ್ರದಲ್ಲಿ ಆರಂಭವಾಗಲಿದೆ.
-ಸುಂದರ್‌ ಜೆ. ಕಲ್ಮಾಡಿ, ನಗರಸಭಾ ಸದಸ್ಯರು, ಕಲ್ಮಾಡಿ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next