ಕೊಚ್ಚಿ: ಮಲಯಾಳಂ ಸೇರಿದಂತೆ ಹಲವು ಸಿನಿಮಾರಂಗದಲ್ಲಿ ಖಳನಟನಾಗಿ ಮಿಂಚಿದ್ದ ಕಜನ್ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೋಮವಾರ ( ಜೂ.12 ರಂದು) ಮಲಯಾಳಂನ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ, ಎನ್ ಎಂ ಬಾದುಷಾ ಅವರು ನಟನ ನಿಧನ ಸುದ್ದಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
1992 ರಲ್ಲಿ ʼಸೆಂತಮಿಜ್ ಪಾಟ್ಟುʼ ಸಿನಿಮಾದಲ್ಲಿ ಭೂಪತಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಅವರು ಮಾಲಿವುಡ್, ಸ್ಯಾಂಡಲ್ ವುಡ್, ತಮಿಳು ಚಿತ್ರರಂಗದಲ್ಲಿ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ. ಖಳನಟನಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಅವರು ಮಮ್ಮುಟ್ಟಿಯವರ “ದಿ ಕಿಂಗ್” ಚಿತ್ರದಲ್ಲಿ ವಿಕ್ರಮ್ ಘೋರ್ಪಡೆ ಎಂಬ ಪಾತ್ರದಿಂದ ನೆಗೆಟಿವ್ ರೋಲ್ ನಲ್ಲಿ ಹೆಚ್ಚು ಫೇಮ್ ಆದರು.
ಇದನ್ನೂ ಓದಿ: ಮೊದಲ ಪತಿಯಿಂದ ದೂರ ಮಾಡಿ, 2ನೇ ಮದುವೆ ಮಾಡಿಸಿದ ಮನೆಯವರು: ಹೊಸ ಪತಿಗೆ ರಾಖಿ ಕಟ್ಟಿದ ಯುವತಿ.!
“ಕಲೈಜ್ಞಾನ್”, “ಸೇತುಪತಿ IPS”, “ಡ್ಯುಯೆಟ್”, “ಮುರೈ ಮಾಮನ್”, “ಆನಾಜಗನ್ “, “ಕರುಪ್ಪು ನಿಲ” ಮುಂತಾದ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
“ಸಿಐಡಿ ಮೂಸಾ”, “ಉಲ್ಲತೈ ಅಲ್ಲಿತಾ”, “ಮೆಟ್ಟುಕುಡಿ”, “ದಿ ಡಾನ್” , “ನಾಮ್ ಇರುವರ್ ನಮಕು ಇರುವರ್” ಮುಂತಾದ ಮಲಯಾಳಂ ಸಿನಿಮಾ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಕನ್ನಡದಲ್ಲಿ “ಹಬ್ಬ”, “ನಾಗದೇವತೆ”, “ಚೆಲುವ” ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದರು.
ಅವರ ನಿಧನಕ್ಕೆ ಮಾಲಿವುಡ್ ಸಿನಿರಂಗ ಸೇರಿದಂತೆ ಸಿನಿಮಾರಂಗದ ಕಲಾವಿದರು ಸಂತಾಪ ಸೂಚಿಸಿದ್ದಾರೆ.