ಕನ್ನಡದಲ್ಲೀಗ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳ ಪರ್ವ. ಹೌದು, ಈಗಾಗಲೇ ಇತಿಹಾಸ ವಿಷಯ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ, “ಸುವರ್ಣ ಸುಂದರಿ’ ಎಂಬ ಚಿತ್ರವೂ ಸೇರಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿದ್ದು, ಇದೊಂದು ಪುನರ್ಜನ್ಮದ ಕಥಾವಸ್ತು ಹೊಂದಿದೆ. ಸುಮಾರು 600 ವರ್ಷಗಳ ಹಿಂದಿನ ಕಥೆ ಹೇಳಹೊರಟಿರುವ ಚಿತ್ರತಂಡ, ಇಲ್ಲಿ ನೋಡುಗನಿಗೆ ಮೂರು ಹಂತಗಳಲ್ಲಿ ವಿಶೇಷ ಮನರಂಜನೆ ಕೊಡಲು ಸಜ್ಜಾಗಿದೆ.
ಅಂದಹಾಗೆ, ಈ ಚಿತ್ರಕ್ಕೆ ಎಂ.ಎಸ್.ಎನ್.ಸೂರ್ಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ಹಲವು ತೆಲುಗು ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಇರುವ ಸೂರ್ಯ, ಮಾಧ್ಯಮ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಇದೇ ಮೊದಲ ಸಲ, ಇತಿಹಾಸ ಕುರಿತ ಕಥೆ ಹೆಣೆದು, ನಿರ್ದೇಶನ ಮಾಡಿದ್ದಾರೆ. ಇತಿಹಾಸದ ಕಥೆ ಮತ್ತು ಪುನರ್ಜನ್ಮದ ಕಥೆಗಳನ್ನು ಹೇಳಬೇಕೆಂದರೆ, ಸಾಕಷ್ಟು ಸಮಯ ಮತ್ತು ಬುದ್ಧಿ ಬೇಕು. ಅದನ್ನು ಅಷ್ಟೇ ಜಾಣತನದಿಂದ ನಿರ್ವಹಿಸಿರುವ ನಿರ್ದೇಶಕರು, ಇಲ್ಲಿ ಹೆಚ್ಚಾಗಿ ಗ್ರಾಫಿಕ್ಸ್‌ಗೆ ಮೊರೆ ಹೋಗಿದ್ದಾರೆ.
ಅಂದಹಾಗೆ, ಟೀಸರ್ ಹೊರಬಂದಿದ್ದು, ಸಾಯಿಕುಮಾರ್ ಅವರ ಹಿನ್ನೆಲೆ ಧ್ವನಿ ಇದೆ. ಅದಕ್ಕೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಬೆಂಗಳೂರು, ವಿಜಾಪುರ, ಹೈದರಾಬಾದ್, ಕೇರಳ ಸೇರಿದಂತೆ ಅನೇಕ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಸರಿ, ಈ “ಸುವರ್ಣ ಸುಂದರಿ’ ಕಥೆ ಏನು? ಇದು ವಿಜಯನಗರ ಸಾಮ್ರಾಜ್ಯದ ಆಡಳಿತದಿಂದ ಹಿಡಿದು ವಾಸ್ತವದವರೆಗೂ ಕಥೆಯ ವಿಸ್ತಾರವಿದೆ ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರದಲ್ಲಿ ಸುಮಾರು 10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು ಮತ್ತು 15 ನಿಮಿಷದ ಗ್ರಾಫಿಕ್ಸ್ ತಂತ್ರಜಾnನ ಹೈಲೈಟ್ ಆಗಿದೆ. ಚಿತ್ರದಲ್ಲಿ ಹಿರಿಯ ಕಲಾವಿದೆ ಜಯಪ್ರದಾ, ರಾಮ್, ಸಾಕ್ಷಿ, ಪೂರ್ಣ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಶ್, ಜೈ ಜಗದೀಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಸ್ ಟೀಮ್ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದೆ. ಸಾಯಿ ಕಾರ್ತಿಕ್ ಸಂಗೀತವಿದೆ. ಈಶ್ವರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.