Advertisement

ಕಡಲೇಕಾಯಿ ಪರಿಷೆಗೆ ಚುಂಚಶ್ರೀ ಚಾಲನೆ

09:50 PM Dec 15, 2019 | Lakshmi GovindaRaj |

ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಎದುರು ನೆಲೆಸಿರುವ ಶ್ರೀ ವೀರಾಂಜನೆಯಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೇ ಕಾಯಿ ಪರಿಷೆ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

Advertisement

ಭವ್ಯ ಪಲ್ಲಕ್ಕಿ ಮೆರವಣಿಗೆ: ಕಡಲೇ ಕಾಯಿ ಪರಿಷೆ ಪ್ರಯುಕ್ತ ಮೊದಲು ಜಡಲತಿಮ್ಮನಹಳ್ಳಿ ಗ್ರಾಮದಿಂದ ವೀರಾಂಜನೇಯ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮುತ್ತಿನ ಪಲ್ಲಕ್ಕಿಯೊಂದಿಗೆ ಬೆಂಗಳೂರು ರಸ್ತೆಯ ಮೂಲಕ ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ ಮತ್ತಿತರ ಸಾಂಸ್ಕೃತಿಕ ಕಲಾ ಮೇಳಗಳೊಂದಿಗೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮುಂಭಾಗದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದವರೆಗೂ ಶ್ರದ್ಧಾಭಕ್ತಿಯ ನಡುವೆ ಭವ್ಯ ಮೆರವಣಿಗೆ ನಡೆಸಲಾಯಿತು.

ರಥೋತ್ಸವಕ್ಕೆ ಶ್ರೀಗಳ ಚಾಲನೆ: ಈ ವೇಳೆ ಮುತ್ತಿನ ಪಲ್ಲಕ್ಕಿಯಲ್ಲಿ ತಂದಿದ್ದ ವೀರಾಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಆದಿಚುಂಚನಗರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ವೀರಾಂಜನೇಯಸ್ವಾಮಿ ಆಲಯ ಸುತ್ತ ರಥೋತ್ಸವ ಸಾಗಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ವೀರಾಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಜಾತ್ರೆಯಲ್ಲಿ ಹರಿದ ಸಂಗೀತ ಸುಧೆ: ಕಡಲೇ ಕಾಯಿ ಜಾತ್ರೆ ಹಾಗೂ ವೀರಾಂಜನೇಯಸ್ವಾಮಿ ದೇವರ ಉತ್ಸವದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಹಾಗೂ ಸಂಗೀತ ಗಾಯನ ಕಚೇರಿ ನಡೆಯಿತು. ಬಿಜಿಎಸ್‌ ಸಾಂಸ್ಕೃತಿಕ ಕಲಾ ವೇದಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕೀರ್ತಿನಾಥ ಸ್ವಾಮೀಜಿ ಮತ್ತು ತಂಡದವರಿಂದ ಹಾಗೂ ಸುನಾದ ಸುಗಮ ಸಂಗೀತ ಮತ್ತು ಕಲಾ ಸಂಸ್ಥೆ ಕಲಾವಿದರಿಂದ ವಿಶೇಷ ಗಾಯನ ಕಾರ್ಯಕ್ರಮ ಮೂಡಿ ಬಂತು.

ಕಡಲೇ ಕಾಯಿ ಪರಿಷೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಕಡಲೇ ಕಾಯಿ ಖರೀದಿ ಜೋರಾಗಿತ್ತು. ನೆರೆಯ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಕಡಲೇ ಕಾಯಿಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಕಡಲೇ ಕಾಯಿ ಪರಿಷೆಯಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಂದನಾಥ ಸ್ವಾಮೀಜಿ,

Advertisement

ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಸ್ಥಳೀಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೇರಿದಂತೆ ಆದಿಚುಂಚನಗಿರಿ ಶಾಖಾ ಮಠದ ಕಿರಿಯ ಸ್ವಾಮೀಜಿಗಳು, ಮಠದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿಕ್ಕಬಳ್ಳಾಪುರ ನಂದಿ ಠಾಣೆ ಪಿಎಸ್‌ಐ ಓಂಪ್ರಕಾಶಗೌಡ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ವೀರಾಂಜನೇಯನಿಗೆ ತಂಬಿಟ್ಟಿನ ದೀಪೋತ್ಸವ: ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಪ್ರಯುಕ್ತ ಜಡಲತಿಮ್ಮನಹಳ್ಳಿ, ತುಮ್ಮಕಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಂಗಲಿಯರಿಂದ ನಡೆದ ತಂಬಿಟ್ಟಿನ ದೀಪೋತ್ಸವ ವೀರಾಂಜನೇಯಸ್ವಾಮಿ ಕಡಲೇ ಕಾಯಿ ಜಾತ್ರೆಗೆ ವಿಶೇಷ ಕಳೆ ತಂದು ಕೊಟ್ಟಿತು. ಜಾತ್ರೆ ಪ್ರಯುಕ್ತ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ, ಮರಿಯಪ್ಪ ರಾಮಯ್ಯ ಚಾರಿಟಬಲ್‌ ಟ್ರಸ್ಟ್‌ ಹಾಗೂ ಜಡಲತಿಮ್ಮನಹಳ್ಳಿ ಹಾಗೂ ತುಮಕಲ್ಲಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಪಾನಕ ವಿತರಿಸಲಾಯಿತು.

ಈ ವೇಳೆ ಚುಂಚಶ್ರೀ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಖುದ್ದು ಕಡಲೇ ಕಾಯಿ ವಿತರಿಸಿ ಪರಿಷೆಗೆ ವಿಶೇಷ ಮೆರಗು ನೀಡಿದರು. ಶ್ರೀಗಳು ಜನರ ಬಳಿಗೆ ಎಸೆಯುತ್ತಿದ್ದ ಕಳ್ಳೇಕಾಯಿ ಪಡೆಯಲು ತಾ ಮುಂದು ನಾ ಮುಂದು ಎಂದು ಪರಿಷೆಯಲ್ಲಿ ಜನರ ನೂಕುನುಗ್ಗಲು ಏರ್ಪಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next