ವಾಡಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಗರದ ಸಂತ ಅನ್ನಮ್ಮ ಕ್ಯಾಥೋಲಿಕ್ ಚರ್ಚ್‌ನಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೆ„ಸ್ತ ಧರ್ಮಗುರುಗಳ ಸಹಭಾಗಿತ್ವದಲ್ಲಿ ಶಾಂತಿ, ಸೌಹಾರ್ದತೆ ಕುರಿತು ಸರ್ವಧರ್ಮ ಸಭೆ ನಡೆಯಿತು.
ಹಬ್ಬದ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಹಾಬಾದ ಸಂತ ಥಾಮಸ್ ಚರ್ಚ್ ಪಾಧರ್ ಸ್ಟ್ಯಾನಿ, ಭಾರತ ಸರ್ವ ಧರ್ಮಿಯರಿಂದ ಕೂಡಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ನಮ್ಮ ವಿಚಾರಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಮತ್ತು ಆಚರಣೆಗಳನ್ನು ಪಾಲಿಸುವ ಸ್ವಾತಂತ್ರ್ಯವಿದೆ ಎಂದರು.
ನಮ್ಮ ಧರ್ಮಾಚರಣೆ ಭಿನ್ನವಾಗಿರಬಹುದು. ದೇವರ ಆರಾಧನೆ ವಿಭಿನ್ನವಾಗಿರಬಹುದು. ಆದರೆ ನಾವೆಲ್ಲರೂ ಬಯಸುವುದು ಮಾನವ ಕುಲಕದ ಏಳಿಗೆ ಮತ್ತು ಸಮಾಜದ ಶಾಂತಿಯೇ ಆಗಿದೆ. ಕಷ್ಟ, ದುಃಖ, ರೋಗ, ಅಸಮಾನತೆ ಜನರ ಬದುಕಿಗೆ ಮಾರಕವಾಗಿವೆ. ಪರಸ್ಪರ ಅಪನಂಬಿಕೆ, ದ್ವೇಷ, ಸ್ವಾರ್ಥ ನಮ್ಮ ಐಕ್ಯತೆ ಒಡೆದುಹಾಕುತ್ತಿದೆ. ಧರ್ಮದ ಚೌಕಟ್ಟನ್ನು ಮೀರಿ ಸ್ನೇಹ ಸೌಹಾರ್ದತೆಯಿಂದ ಬಾಳುವುದನ್ನು ನಾವು ಕಲಿಯಬೇಕಿದೆ ಎಂದು ಹೇಳಿದರು.
ಹಿಂದೂಪರ ಸಂಘಟನೆ ಮುಖಂಡ ವೀರಣ್ಣ ಯಾರಿ, ಜಾಮಿಯಾ ಮಸೀದಿಯ ಮೌಲಾನಾ ಅಬ್ದುಲ್ ಖ್ವಾಲೀದ್ ಬಾರಿ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಚಿಂತನೆಗಳೆಲ್ಲವೂ ಮಾನವೀಯ ಮೌಲ್ಯಗಳನ್ನೇ ಎತ್ತಿ ಹಿಡಿದಿವೆ ಎಂದರು.
ಸಂತ ಅನ್ನಮ್ಮ ಕ್ಯಾಥೋಲಿಕ್ ಚರ್ಚ್ ಪಾಧರ್ ವಿಲ್ಬರ್ಟ್ ವಿನಯ್ ಲೋಬೊ ಮಾತನಾಡಿದರು. ಲಕ್ಷ್ಮೀನಾರಾಯಣ ಮಂದಿರದ ಅರ್ಚಕ ದುರ್ಗಾ ಪ್ರಸಾದ ಪಂಡಿತ್, ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ಗ್ರೇಸಿ, ಸಿಸ್ಟರ್ ತೆಕಲಾಮೇರಿ, ವಿವಿಧ ಧರ್ಮಗಳ ಮುಖಂಡರಾದ ಪಿ. ಕ್ರಿಸ್ಟೋಫರ್, ಎಸ್.ಆರ್. ಆನಂದ, ವಿಠ್ಠಲ ನಾಯಕ, ಜಾರ್ಜ್ ಪ್ರಕಾಶ, ಸಾಲೋಮನ್ ರಾಜಣ್ಣ, ಸತೀಶ ಇತರರು ಪಾಲ್ಗೊಂಡಿದ್ದರು.