Advertisement

ಕ್ರಿಸ್ಮಸ್ ಆಚರಣೆ‌: ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ

12:33 AM Dec 25, 2020 | sudhir |

ಮಂಗಳೂರು/ಉಡುಪಿ: ಯೇಸು ಕ್ರಿಸ್ತರ ಜನನದ ಹಬ್ಬದ ಮುನ್ನಾ ದಿನವಾದ ಗುರುವಾರ ಕ್ರೈಸ್ತರು ಕ್ರಿಸ್ಮಸ್‌ ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಶುಕ್ರವಾರ ಬೆಳಗ್ಗೆ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಬಲಿ ಪೂಜೆಗಳು ನೆರವೇರಲಿದ್ದು, ಕ್ರೈಸ್ತ ದೇವಾಲಯಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

Advertisement

ಕರಾವಳಿಯ ಎಲ್ಲ ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್‌ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ನಿರ್ಮಿಸಲಾಗಿದ್ದು. ನಕ್ಷತ್ರಗಳನ್ನು ಜೋಡಿಸಲಾಗಿದೆ. ಚರ್ಚ್‌ಗಳಲ್ಲಿ ಗುರುವಾರ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು. ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಕಂದ ಯೇಸುವಿಗೆ ನಮಿಸಿದರು.

ಗುರುವಾರ ರಾತ್ರಿ ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್‌ ರೆ|ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಮತ್ತು ಕಲ್ಯಾಣಪುರದ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಬಿಷಪ್‌ ರೆ|ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಮಂಗಳೂರು ಕೆಥೆಡ್ರಲ್‌ನ ರೆಕ್ಟರ್‌ ರೆ|ಆಲ್ಫ್ರೆಡ್‌ ಜೆ.ಪಿಂಟೋ, ಸಹಾಯಕ ಗುರು
ರೆ| ವಿನೋದ್‌ ಲೋಬೋ, ರೊಸಾರಿಯೊ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ|ವಿಕ್ಟರ್‌ ಡಿ’ಸೋಜಾ, ಕಲ್ಯಾಣಪುರ ಕೆಥೆಡ್ರಲ್‌ನ ರೆಕ್ಟರ್‌ ರೆ| ಫಾ| ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ರೆ|ಫಾ| ಕೆನ್ಯೂಟ್‌ ನೊರೊನ್ಹಾ ಅವರು ಭಾಗವಹಿಸಿದ್ದರು.

ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಂಡು, ಸರಳ ಮಾದರಿಯಲ್ಲಿ ಶುಭಾಶಯ ಸಲ್ಲಿಸುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದ್ದು ಸಾಂತ್ರಾಕ್ರಾಸ್‌ ಸಂಭ್ರಮವಿರಲಿಲ್ಲ.

ಶುಕ್ರವಾರ ಕ್ರಿಸ್ಮಸ್‌ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯಲಿದೆ. ಮನೆಗಳಲ್ಲಿ ಕ್ರಿಸ್ಮಸ್‌ ವಿಶೇಷ ತಿಂಡಿ ತಿನಿಸು “ಕುಸ್ವಾರ್‌’ ವಿನಿಮಯ ಮತ್ತು ಹಬ್ಬದ ಭೋಜನದೊಂದಿಗೆ ಹಬ್ಬದ ಸಂಭ್ರಮ ನೆರವೇರಲಿದೆ.

Advertisement

ಅಶಕ್ತರೊಡನೆ ಬೆರತು ಹಬ್ಬ ಆಚರಿಸೋಣ
ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಬಾಲಯೇಸು ಆಹಾರವಿಲ್ಲದ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು. ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು. ಉದ್ಯೋಗ ಕಳೆದುಕೊಂಡು ತಮ್ಮ ಕುಟುಂಬಗಳನ್ನು ಸಾಕಲು ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆ ಅರಿತವರು. ಕೊರೊನಾ ಮತ್ತು ಇತರ ರೋಗಗಳಿಂದ ಸೋಂಕಿತರಾಗಿ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಕಷ್ಟಪಡುತ್ತಿರುವ ಹೆತ್ತ¤ವರ ದುಖವನ್ನು ಅರಿತವರಾಗಿದ್ದು, ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವು ಬೆರೆತು ಕ್ರಿಸ್ಮಸ್‌ ಆಚರಿಸೋಣ ಎಂದು ರೆ|ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next